23/12/2024

Law Guide Kannada

Online Guide

ಕಾನೂನು ಕಠಿಣವಿದ್ದರೂ ಅನಾರೋಗ್ಯಕ್ಕೀಡಾದ ಆರೋಪಿಗೆ ಜಾಮೀನು: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದಹೆಲಿ : ಕಾನೂನುಗಳು ಎಷ್ಟೇ ಕಠಿಣವಿದ್ದರೂ ಸರಿ ಅನಾರೋಗ್ಯಕ್ಕೀಡಾದ ಆರೋಪಿಗೆ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪದಡಿ ED (ಜಾರಿ ನಿರ್ದೇಶನಾಲಯ) ಬಂಧಿಸಿದ್ದ ಸೇವಾ ವಿಕಾಸ್ ಸಹಕಾರಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಅಮರ್ ಸಾಧುರಾಮ್ ಮುಲ್ಚಂದಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರು ಇರುವ ತ್ರಿಸದಸ್ಯ ಪೀಠವು ವೈದ್ಯಕೀಯ ಕಾರಣಕ್ಕಾಗಿ ಜಾಮೀನು ಮಂಜೂರು ಮಾಡಿದೆ.

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯು (ಪಿಎಂಎಲ್ ಎ) ಬಹಳ ಕಠಿಣವಾಗಿದ್ದರೂ ಆರೋಪಿ ಅನಾರೋಗ್ಯಕ್ಕೀಡಾದಾಗ ಆತನಿಗೆ ಈ ಕಾಯ್ದೆಯ ಅಡಿಯಲ್ಲಿ ಜಾಮೀನು ನೀಡಬಹುದು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (Prevention of Money Laundering Act, 2002) ಅಡಿ ಬಂಧಿತ ಅನಾರೋಗ್ಯದಿಂದ ಬಳಲುವ, ದುರ್ಬಲ ಆರೋಪಿಗಳಿಗೆ ಜಾಮೀನು ನೀಡಬಹುದಾಗಿದೆ. ವೈದ್ಯಕೀಯ ಮಂಡಳಿಯ ವರದಿ ಪರಿಶೀಲಿಸಿದ ನಂತರ ಅನಾರೋಗ್ಯ ಇಲ್ಲವೇ ಅಸ್ವಸ್ಥರಾಗಿದ್ದರೆ ಅಂತಹವರಿಗೆ ಜಾಮೀನು ನೀಡಬಹುದು ಎಂದು ತಿಳಿಸಿದೆ.

ಅಮರ್ ಅವರು ವೈದ್ಯಕೀಯ ಕಾರಣಕ್ಕಾಗಿ ತಮಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಆಗಸ್ಟ್ ನಲ್ಲಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅಮರ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್, ಆರೋಪಿ ಅನಾರೋಗ್ಯದಲ್ಲಿದ್ದರೆ ಜಾಮೀನು ನೀಡಬಹುದು ಎಂದು ತಿಳಿಸಿದೆ.

ಅಮರ್ ಅವರು 429 ಕೋಟಿ ಮೊತ್ತದ ಹಣದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ಅವರನ್ನು 2023 ರ ಜುಲೈ 1 ರಂದು ಬಂಧಿಸಲಾಗಿತ್ತು. ಆರೋಪಿ ವಿರುದ್ಧ ನಾಲ್ಕು ಎಫ್ ಐ ಆರ್ ಗಳಿವೆ . ಹಿರಿಯ ವಕೀಲ ಎ.ಎಸ್ ನಾಡಕರ್ಣಿ ಅವರು ಪೀಠದ ಗಮನಕ್ಕೆ ತಂದರು. ಅಮರ್ ಅವರು ಒಂದುವರ್ಷಕ್ಕೂ ಹೆಚ್ಚಿನ ಅವಧಿಯಿಂದ ಜೈಲಿನಲ್ಲಿದ್ದಾರೆ ಎಂಬುದನ್ನು ಪೀಠವು ದಾಖಲಿಸಿಕೊಂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.