14/01/2025

Law Guide Kannada

Online Guide

ಒಂದು ಕಣ್ಣು ಕಳೆದುಕೊಂಡರೂ ಅದು ಶೇ. 100ರಷ್ಟು ಅಂಗವೈಕಲ್ಯ : ಸುಪ್ರೀಂ ಕೋರ್ಟ್ ಅಭಿಪ್ರಾಯ

ನವದೆಹಲಿ: ಅಪಘಾತದಲ್ಲಿ ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದ ವ್ಯಕ್ತಿಗೆ ನೀಡಬೇಕಾದ ಪರಿಹಾರ ಮೊತ್ತವನ್ನ ಹೆಚ್ಚಿಸಿ ಆದೇಶಿಸಿದ ಸುಪ್ರೀಂಕೋರ್ಟ್ , ಒಂದು ಕಣ್ಣು ಕಳೆದುಕೊಂಡರೂ ಅದು ಶೇ. 100ರಷ್ಟು ಅಂಗವೈಕಲ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಪಘಾತದಲ್ಲಿ ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದ ಕೇರಳದ ಜಯನಂದನ್ ಎಂಬುವವರು ಪರಿಹಾರದ ಮೊತ್ತ ಹೆಚ್ಚಳಕ್ಕೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಈ ಮಾತು ಹೇಳಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ ಕರೋಲ್ ಹಾಗೂ ಮನಮೋಹನ ಅವರು ಇದ್ದ ನ್ಯಾಯಪೀಠವು, ಅರ್ಜಿದಾರರಿಗೆ ಶೇ. 8ರ ಬಡ್ಡಿಯೊಂದಿಗೆ ಒಟ್ಟು Rs 15,98,000 ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದೆ.

ಹಾಗೆಯೇ ವಜ್ರ ಕತ್ತರಿಸುವುದಕ್ಕೆ ಅಗಾಧ ಕುಶಲತೆ, ಭಾರಿ ನಿಖರತೆಯ ಅಗತ್ಯವಿದೆ. ಈ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿ ಒಂದು ಕಣ್ಣು ಕಳೆದುಕೊಂಡಿದ್ದರೂ, ಆತನದು ಶೇ 100ರಷ್ಟು ಅಂಗವೈಕಲ್ಯ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ

39 ವರ್ಷದ ಜಯನಂದನ್ ಅವರು 2005ರ ಫೆಬ್ರುವರಿ 15ರಂದು ಕುನ್ನಂಕುಳಂ ವಡಂಕೇರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಆಟೊವೊಂದಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ತ್ರಿಶ್ಶೂರಿನ ಮೋಟಾರ್ ಅಪಘಾತ ಕ್ಲೇಮುಗಳ ನ್ಯಾಯಮಂಡಳಿಯು ಜಯನಂದನ್ ಅವರ ಅಂಗವೈಕಲ್ಯ ಶೇ 49ರಷ್ಟು ಎಂದು ತೀರ್ಮಾನಿಸಿ, ಅವರಿಗೆ ಶೇ. 8ರ ಬಡ್ಡಿಯೊಂದಿಗೆ Rs 8.70 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.

ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಅವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದರು. ಈ ವೇಳೆ ಹೈಕೋರ್ಟ್ ಜಯನಂದನ್ ಅವರು ಶೇ 65ರಷ್ಟು ಅಂಗವೈಕಲ್ಯ ಹೊಂದಿರುವುದಾಗಿ ತೀರ್ಪು ನೀಡಿ ಪರಿಹಾರ ಮೊತ್ತವನ್ನು Rs. 10,57,500ಕ್ಕೆ ಹೆಚ್ಚಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.