23/12/2024

Law Guide Kannada

Online Guide

ಕರ್ನಾಟಕದಲ್ಲಿದ್ದ ಮೇಲೆ ಕನ್ನಡದಲ್ಲೇ ನಾಮಫಲಕ ಪ್ರದರ್ಶಿಸಿ : ಹೈಕೋರ್ಟ್ ಮೌಖಿಕ ಸೂಚನೆ

ಬೆಂಗಳೂರು: ನೀವು ಕರ್ನಾಟಕದಲ್ಲಿರುವಾಗ ಕನ್ನಡ ಭಾಷೆಯಲ್ಲೇ ನಾಮಫಲಕ ಪ್ರದರ್ಶಿಸಬೇಕು. ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು ಎಂದು ಭಾರತೀಯ ರಿಟೇಲರ್ಸ್ ಅಸೋಸಿಯೇಷನ್ ಗೆ ಹೈಕೋರ್ಟ್ ಮೌಖಿಕವಾಗಿ ಸೂಚನೆ ನೀಡಿದೆ.

ವಾಣಿಜ್ಯ ಮತ್ತು ಇತರೆ ಸಂಸ್ಥೆಗಳು, ಅಂಗಡಿ, ವಾಣಿಜ್ಯ ಮಳಿಗೆಗಳು ನಾಮ ಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಭಾರತೀಯ ರಿಟೇಲರ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ಸೂಚನೆ ನೀಡಿದೆ.

ನೀವು ಕರ್ನಾಟಕದಲ್ಲಿರುವಾಗ, ನೀವು ಕನ್ನಡ ಭಾಷೆಯಲ್ಲಿ ಫಲಕಗಳನ್ನು ಪ್ರದರ್ಶಿಸಬೇಕು. ”ರಾಜ್ಯದಲ್ಲಿರುವ ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯ ಚಟುವಟಿಕೆಗಳ ಬಗ್ಗೆಯೂ ನ್ಯಾಯಾಧೀಶರು ಪ್ರಸ್ತಾಪಿಸಿದರು.

ಗಮನಾರ್ಹ ಸಂಗತಿಯೆಂದರೆ, ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತುರ್ತು ಮನವಿಯ ಮೇಲೆ ಮೊದಲ ಬಾರಿಗೆ ವಿಚಾರಣೆ ನಡೆಸಿದ್ದರು. ಆಗ ಏಕಸದಸ್ಯ ಪೀಠವು ಸುತ್ತೋಲೆಯ ಅನುಷ್ಠಾನಕ್ಕೆ ಮುಂದಾಗದಂತೆ ರಾಜ್ಯಕ್ಕೆ ನಿರ್ದೇಶನ ನೀಡಿದ್ದರು. 60 ಪ್ರತಿಶತ ಬೋರ್ಡ್‌ಗಳು ಕನ್ನಡದಲ್ಲಿ ಇಲ್ಲದಿದ್ದರೆ, ಆ ವ್ಯಾಪಾರ ಸಂಸ್ಥೆಗಳು ಅಥವಾ ಉದ್ಯಮಗಳನ್ನು ಮುಚ್ಚಲಾಗುವುದು. ಈ ಪ್ರಾಥಮಿಕ ದೃಷ್ಟಿ ಅಸಮರ್ಥನೀಯವಾಗಿದೆ, ” ಎಂದು ಪೀಠವು ಮಾರ್ಚ್ 18 ರಂದು ಗಮನಿಸಿತ್ತು.

ಇನ್ನು ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಇದ್ದು, ಆನಂತರ ರಾಜ್ಯದಲ್ಲಿ ಕನ್ನಡ ಅಭಿಯಾನ ಆರಂಭವಾಗಲಿದೆ, ಹಾಗಾಗಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಆದರೆ ತುರ್ತು ವಿಚಾರಣೆಗೆ ನಿರಾಕರಿಸಿದ ನ್ಯಾಯಪೀಠ, ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿರುವಾಗ ನೀವು ಕನ್ನಡ ಭಾಷೆಯಲ್ಲಿಯೇ ನಾಮ ಫಲಕಗಳನ್ನು ಪ್ರದರ್ಶಿಸಲೇಬೇಕು, ಅದಕ್ಕೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಹೇಳಿತು. ಬಳಿಕ ವಿಚಾರಣೆಯನ್ನು ಎರಡು ವಾರಗಳವರೆಗೆ ಮುಂದೂಡಿ, ಮಾರ್ಚ್ 18 ರ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ 2022ಗೆ ತಿದ್ದುಪಡಿ ತರುವ ಮೂಲಕ 2024ರ ಫೆ.26ರಂದು ಸರ್ಕಾರ ಎಲ್ಲ ವಾಣಿಜ್ಯ ಸಂಸ್ಥೆಗಳು ತಮ್ಮ ಬೋರ್ಡ್ಗಳಲ್ಲಿ ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲೇಬೇಕೆಂದು ಆದೇಶ ಹೊರಡಿಸಿತ್ತು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ 2022ಕ್ಕೆ 2024ರಲ್ಲಿ ಮಾಡಿರುವ ತಿದ್ದುಪಡಿಯನ್ನು ಅರ್ಜಿದಾರರು ಪ್ರಶ್ನಿಸಿದ್ದು, ಅದು ಅಸಂವಿಧಾನಿಕ ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಟ್ರೇಡ್ ಮಾರ್ಕ್ ಕಾಯಿದೆಗೆ ವಿರುದ್ಧವಾಗಿದೆ. ಹಾಗಾಗಿ ತಿದ್ದುಪಡಿ ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.