23/12/2024

Law Guide Kannada

Online Guide

ಸೇನಾಧಿಕಾರಿಗಳ ಬಗ್ಗೆ ಅವಹೇಳನ ಸಂದೇಶ: ವಕೀಲರೊಬ್ಬರು ಅರೆಸ್ಟ್

ಮಡಿಕೇರಿ: ದೇಶ ಕಂಡ ಮಹಾನ್ ಸೇನಾಧಿಕಾರಿಗಳನ್ನ ಅವಹೇಳನ ಮಾಡಿ ವಾಟ್ಸಪ್ ನಲ್ಲಿ ಪೋಸ್ಟ್ ಹಾಕಿದ ಆರೋಪದ ಮೇಲೆ ವಕೀಲರೊಬ್ಬರನ್ನ ಬಂಧಿಸಲಾಗಿದೆ.

ಬಂಧಿತ ವಕೀಲರನ್ನು ದಕ್ಷಿಣ ಕನಕ್ಕಡ ಜಿಲ್ಲೆಯ ಸುಳ್ಯ ತಾಲೂಕಿನ ಹಾಲೆಟ್ಟಿ ಗ್ರಾಮದ ವಿದ್ಯಾಧರ ಗೌಡ (66) ಎಂದು ಗುರುತಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಡವ ಸೇನಾನಿಗಳ ಬಗ್ಗೆ ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆರೋಪದಲ್ಲಿ ವಕೀಲರನ್ನು ಬಂಧಿಸಲಾಗಿದೆ.

ಸಪ್ತಸಾಗರ (ಕಡಲು) ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಮೊಬೈಲ್ ಸಂಖ್ಯೆಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರನ್ನು ಅವಾಚ್ಯವಾಗಿ ನಿಂದಿಸಿ ಸಂದೇಶ ಹಾಕಲಾಗಿತ್ತು. ವಾಟ್ಸಾಪ್ ಗ್ರೂಪ್ನಲ್ಲಿ ನಡೆದ ಚರ್ಚೆಯ ತುಣುಕು ಸಾಮಾಜಿಕ ಜಾಲದಲ್ಲಿ ವ್ಯಾಪಕವಾಗಿ ಹರಿದಾಡಿ ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.

ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಸೇನಾನಿಗಳ ಬಗ್ಗೆ ಅವಹೇಳನಾಕಾರಿ ಸಂದೇಶ ಹಾಕಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದೇವೆ ಎಂದರು.

ದೇಶದ ಮಹಾನ್ ನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣವಾದ ವ್ಯಾಟ್ಸಾಪ್ ನ ಸಪ್ತಸಾಗರ ಎಂಬ ಗ್ರೂಪ್ನಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಮೂಲಕ ಮಡಿಕೇರಿಯ ಕೆ.ಆರ್. ವಿದ್ಯಾಧರ್ ಅವರು ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿರುವುದು ತನಿಖೆಯಿಂದ ದೃಢವಾಗಿದೆ. ಅವರ ವಿರುದ್ಧ ಸೆಕ್ಷನ್ 192, 353 (2) 319 ಬಿ.ಎನ್.ಸಿ. ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.