ಪತಿಗೆ ವೈವಾಹಿಕ ಸುಖಭೋಗಗಳನ್ನ ನೀಡದಿರುವುದು ಕ್ರೌರ್ಯಕ್ಕೆ ಸಮಾನ – ಹೈಕೋರ್ಟ್
ಬೆಂಗಳೂರು: ಸಂಸಾರದಲ್ಲಿ ದಂಪತಿಗಳ ನಡುವೆ ಜಗಳ ಸಾಮಾನ್ಯ. ಭಿನ್ನಮತವಿಲ್ಲದ ಸಂಸಾರ ನಿಸ್ಸಾರವೇ ಸರಿ. ಪತಿ ಪತ್ನಿ ನಡುವೆ ಸರಸ ವಿರಸಗಳು ಒಂದೇ ನಾಣ್ಯದ ಎರಡು ಮುಖಗಳಿದಂತೆ. ಅಂತೆಯೇ ಪತಿಗೆ ಪತ್ನಿ ಲೈಂಗಿಕ ಸುಖ ನೀಡದಿರುವುದು ಕ್ರೌರ್ಯಕ್ಕೆ ಸಮ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರಿನ ಹೆಸರಘಟ್ಟದ ನಿವಾಸಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠವು, ಪತ್ನಿ ದೂರ ನೆಲೆಸಿ ವೈವಾಹಿಕ ಸುಖಭೋಗಗಳಿಂದ ಪತಿಯನ್ನ ವಂಚಿಸುವುದು ಕ್ರೌರ್ಯಕ್ಕೆ ಸಮಾನ ಮಹತ್ವದ ತೀರ್ಪು ನೀಡಿದೆ.
ಸುಮಾರು 8 ವರ್ಷಗಳ ಕಾಲ ದೂರ ನೆಲೆಸಿ, ವೈವಾಹಿಕ ಸುಖಭೋಗಗಳಿಂದ ಆತನನ್ನು ವಂಚಿಸುವುದು ಕ್ರೌರ್ಯಕ್ಕೆ ಸಮಾನವಾದದ್ದು. ಅಲ್ಲದೇ ಪತ್ನಿ ಪತಿಯನ್ನು ಮತ್ತು ಮನೆ ತೊರೆದಿರುವ ಆಧಾರದಲ್ಲಿ ವಿಚ್ಛೇದನ ಮಂಜೂರು ಮಾಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.
ಶಾಶ್ವತ ಜೀವನಾಂಶ ನೀಡಬೇಕಾದ ಅನಿವಾರ್ಯ ಇಲ್ಲ ಅಲ್ಲದೇ ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸ್ವಂತ ದುಡಿಮೆಯಿದೆ. ತಮ್ಮ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯದ ಮುಂದೆ ಬಂದಿಲ್ಲ. ಹೀಗಾಗಿ ಅವರಿಗೆ ಶಾಶ್ವತ ಜೀವನಾಂಶ ನೀಡಬೇಕಾದ ಅನಿವಾರ್ಯ ಎದುರಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಜೊತೆಗೆ ಮಕ್ಕಳ ಹೆಸರಿನಲ್ಲಿ ತಲಾ 10 ಲಕ್ಷ ರೂ. ಗಳನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ಸೂಚನೆ ನೀಡಿದೆ. ಈ ಮೊತ್ತ ಮಕ್ಕಳು ಪ್ರೌಢಾವಸ್ಥೆಗೆ ತಲುಪಿದ ಬಳಿಕ ಪಡೆದುಕೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ವಿವರ..
2004ರ ಮೇ 2ರಂದು ಅರ್ಜಿದಾರ ಪತಿ ಹಾಗೂ ಅವರ ಪತ್ನಿ ಉಡುಪಿಯಲ್ಲಿ ವಿವಾಹವಾಗಿದ್ದರು. ಬಳಿಕ ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮದುವೆಯಾದ ಬಳಿಕ ಪತ್ನಿ ತನ್ನ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಫೋನಿನಲ್ಲಿ ಸದಾ ಬ್ಯುಸಿಯಾಗಿದ್ದಳು. ಪತ್ನಿ ಯಾವಾಗಲೂ ಮೊಬೈಲ್ ನಲ್ಲೇ ಇರುವುದನ್ನು ಗಮನಿಸಿದ ಪತಿ ಈ ಬಗ್ಗೆ ತಿಳಿ ಹೇಳಿದ್ದಾನೆ, ಇದರಿಂದ ಕೋಪಗೊಂಡ ಪತ್ನಿ 2016 ರ ಮಾರ್ಚ್ 28 ರಂದು ಇದ್ದಕ್ಕಿದಂತೆ ಪತಿಗೆ ತಿಳಿಸದೆ ಮನೆ ಬಿಟ್ಟು ಹೋಗಿದ್ದಾರೆ. ನಂತರ ಪತಿಯು ಪತ್ನಿಗೆ ಮನೆಗೆ ಹಿಂದಿರುಗುವಂತೆ ಸಾಕಷ್ಟು ಬಾರಿ ಪ್ರಯತ್ನ ಮಾಡಿದರೂ ಅವರು ಹಿಂದಿರುಗಿರಲಿಲ್ಲ.
ಇದರಿಂದ ಬೇಸತ್ತ ಪತಿ ವಿಚ್ಛೇದನ ಕೋರಿ ಉಡುಪಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ