23/12/2024

Law Guide Kannada

Online Guide

ಎದುರುವಾದಿಗೆ ನೋಟಿಸ್ ನೀಡದೇ ಕೋರ್ಟ್ ಕಲಾಪ ದಿನಾಂಕ ಬದಲಾವಣೆ ಸಾಧ್ಯವಿಲ್ಲ – ಸುಪ್ರೀಂಕೋರ್ಟ್

ನವದೆಹಲಿ: ಎದುರುವಾದಿಯ ಗಮನಕ್ಕೆ ಬಾರದೆ, ನೋಟಿಸ್ ನೀಡದೆ ಕಲಾಪದ ದಿನಾಂಕವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ, ನ್ಯಾಯಮೂರ್ತಿ ಅಹ್ವಾನುದ್ದೀನ್ ಅಮಾನುಲ್ಲ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಎದುರುವಾದಿಗೆ ನೋಟೀಸ್ ನೀಡದೆ ಪ್ರಕರಣದ ವಿಚಾರಣಾ ದಿನವನ್ನು ನ್ಯಾಯಾಲಯಗಳು ಬದಲಿಸಲು ಅಥವಾ ಹಿಂದಕ್ಕೆ ಹಾಕಿಕೊಳ್ಳಲು ಬರುವುದಿಲ್ಲ ಅಭಿಪ್ರಾಯ ವ್ಯಕ್ತಪಡಿಸಿದೆ.

ಉತ್ತರಾಖಂಡ ರಾಜ್ಯದ ವಿಚಾರಣಾ ನ್ಯಾಯಾಲಯವು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾದ ಆಲಿಸಲು 2002ರ ಮೇ 30ಕ್ಕೆ ದಿನಾಂಕ ನಿಗದಿಪಡಿಸಿತ್ತು. ಈ ನಿಗದಿತ ದಿನಾಂಕಕ್ಕಿಂತ ಮೊದಲೇ ಮೇ 3ರಂದು ಅರ್ಜಿದಾರರ ಪರ ವಕೀಲರು ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯವು ಮೇ 3ರಂದು ವಾದವನ್ನು ಆಲಿಸಿ ಮೇ 22ರಂದು ಆದೇಶ ಪ್ರಕಟಿಸಿತ್ತು.

ಈ ಮಧ್ಯೆ ಮೇ 20, 2002ರಂದು ಪ್ರತಿವಾದಿ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಮೇ 3ರಂದು ಹೊರಡಿಸಿರುವ ಆದೇಶ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದರು. ಆದರೆ, ಪ್ರತಿವಾದಿಗಳು ಅರ್ಜಿಗೆ ಆಕ್ಷೇಪಣೆಯನ್ನೂ ಸಲ್ಲಿಸದೇ ಇದ್ದುದರಿಂದ ನ್ಯಾಯಾಲಯ ಏಕಪಕ್ಷೀಯ ಆದೇಶ ಮಾಡಿರುವುದಾಗಿ ಸಮರ್ಥಿಸಿಕೊಂಡಿತು.

ಆ ಬಳಿಕ, ಪ್ರತಿವಾದಿಯು ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ, ಹೈಕೋರ್ಟ್ ಸಹ ವಿಚಾರಣಾ ನ್ಯಾಯಾಲಯದ ಆದೇಶವು ಸರಿಯಾಗಿದೆ. ಇದು ಮಧ್ಯಪ್ರವೇಶ ಮಾಡಲು ಅರ್ಹವಾದ ಪ್ರಕರಣವಲ್ಲ ಎಂದು ತೀರ್ಪು ನೀಡಿತು. ಬಳಿಕ ಇದರಿಂದ ಬಾಧಿತರಾದ ಮೇಲ್ಮನವಿದಾರರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎದುರು ಪಕ್ಷಕಾರರಿಗೆ ನೋಟಿಸ್ ನೀಡದೆ ನ್ಯಾಯಾಲಯಗಳು ವಿಚಾರಣೆಯ ದಿನಾಂಕವನ್ನು ಹಿಂದಕ್ಕೆ ಹಾಕಲು ಬದಲಿಸಲು ಬರುವುದಿಲ್ಲ. ಹಾಗೆ ಮಾಡಿದರೆ, ಅದು ಸಹಜ ನ್ಯಾಯಾದ ತತ್ವದ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ

ವಿಚಾರಣಾ ನ್ಯಾಯಾಲಯವು ನಿಗದಿತ ದಿನವಾದ ಮೇ 30ರ ದಿನಾಂಕವನ್ನು ಬದಲಿಸಿ ಮೇ 3ರಂದು ವಿಚಾರಣೆ ನಡೆಸಿದೆ. ಒಂದು ವೇಳೆ, ನಿಗದಿತ ದಿನವಾದ ಮೇ 30ರಂದೇ ನಡೆಸುತ್ತಿದ್ದರೆ ಮೇಲ್ಮನವಿದಾರರು ವಿಚಾರಣೆಗೆ ಹಾಜರಿರಲು ಸಾಧ್ಯವಾಗುತ್ತಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮೇ 30ರಂದು ಮೇಲ್ಮನವಿದಾರರು ಹಾಜರಾಗಿ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದರೂ ಅದನ್ನು ಪರಿಗಣಿಸದಿರುವುದು ಸೂಕ್ತವಲ್ಲ ಎಂದ ಸುಪ್ರೀಂಕೋರ್ಟ್ ನ್ಯಾಯಪೀಠ, ಮೇ 22ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ವಜಾಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.