25/12/2024

Law Guide Kannada

Online Guide

ಹೊಸ ವರ್ಷಕ್ಕೆ ದಿನಗಣನೆ: 2024ರಲ್ಲಿ ‘ಹೈಕೋರ್ಟ್’ ಕೊಟ್ಟ ಪ್ರಮುಖ ತೀರ್ಪುಗಳ ಬಗ್ಗೆ ಒಮ್ಮೆ ಮೆಲುಕು ಹಾಕೋಣ ಬನ್ನಿ…!

ಬೆಂಗಳೂರು: 2024ನೇ ವರ್ಷ ಮುಗಿದು 2025ಕ್ಕೆ ಕಾಲಿಡಲು ದಿನಗಣನೆ ಆರಂಭವಾಗಿದ್ದು, ಹೊಸ ಸಂವತ್ಸರದ ಆರಂಭ ಜಗತ್ತು ಸಜ್ಜಾಗಿದೆ. ಈ ಮಧ್ಯೆ ಈ ವರ್ಷದಲ್ಲಿ ರಾಜ್ಯದ ಉಚ್ಚನ್ಯಾಯಾಲಯ (ಹೈಕೋರ್ಟ್) ಸಾಕಷ್ಟು ಪ್ರಕರಣಗಳಲ್ಲಿ ಮಹತ್ವ ತೀರ್ಪುಗಳನ್ನ ಪ್ರಕಟಿಸಿದೆ.

ಹಾಗಾದರೆ ಈ ವರ್ಷದಲ್ಲಿ ಹೈಕೋರ್ಟ್’ ಪ್ರಕಟಿಸಿರುವ ಪ್ರಮುಖ ತೀರ್ಪುಗಳ ಬಗ್ಗೆ ಒಮ್ಮೆ ಮೆಲುಕಿ ಹಾಕೋಣ ಬನ್ನಿ…!

ಆಸ್ತಿ ಮಾರಾಟ ಸೇರಿದಂತೆ ಇತರೆ ದಾಖಲೆಗಳ ನೋಂದಣಿಗೂ ಮುನ್ನ ಆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಆಧಾರ್ ನೈಜತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶ.
ಬಾಲ್ಯ ವಿವಾಹದಿಂದಾಗುವ ಪರಿಣಾಮ ಅರಿಯದೆ ಪರಸ್ಪರ ಒಮ್ಮತದಿಂದ ಹದಿಹರೆಯದವರು ಲೈಂಗಿಕ ಸಂಭೋಗ ನಡೆಸುವುದರಿಂದ ಅದನ್ನು ಅಪರಾಧೀಕರಿಸುವುದಕ್ಕೆ ಸಾಧ್ಯವಿಲ್ಲ. ಅಪ್ರಾಪ್ತೆಯಾಗಿರುವ ಪತ್ನಿ ಮತ್ತು ಆಕೆಯ ಮಗುವಿಗೆ ಆರೋಪಿತರೇ ಜೀವನಾಧಾರವಾಗಿದ್ದ ಹಿನ್ನೆಲೆಯಲ್ಲಿ, ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ರದ್ದುಪಡಿಸಿ ಆದೇಶಿಸಿದ್ದ ಹೈಕೋರ್ಟ್.

ಸರ್ಕಾರ ಬದಲಾದರೆ ಅಧಿಕಾರಿಗಳ ವಿರುದ್ಧದ ಪ್ರಕರಣ ಹಿಂಪಡೆಯಲು ಮುಂದಾಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದ ಹೈಕೋರ್ಟ್.

ಮೃತಪಟ್ಟ ತಂದೆಯ ನೌಕರಿಯನ್ನು ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ನೀಡಲಾಗದು ಎಂದಿದ್ದ ಹೈಕೋರ್ಟ್.

ರಾಜ್ಯದಲ್ಲಿ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಪಡಿಸಿ ಮಹತ್ವದ ಆದೇಶ ನೀಡಿದ್ದ ಹೈಕೋರ್ಟ್, ದ್ವಿಸದಸ್ಯ ಪೀಠದಿಂದ ಅನುಮತಿ, ಬಳಿಕ ಸುಪ್ರೀಂಕೋರ್ಟ್ನಿಂದ ಅನುಮತಿ ರದ್ದು.

ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣದಲ್ಲಿ ಡಾ.ಶಿವಮೂರ್ತಿ ಮುರುಘಾಶರಣರ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ಸಂಬಂಧದ ಆರೋಪವನ್ನು ಮರು ನಿಗದಿ ಮಾಡಲು ಹೈಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ.

ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಮಹಿಳೆಯ ರಕ್ಷಣೆಗೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಗೆ ತರಾಟೆ ತೆಗೆದುಕೊಂಡಿತ್ತು. ಜೊತೆಗೆ, ಮಹಿಳೆಗೆ ಎರಡು ಎಕರೆ ಜಮೀನು ಮತ್ತು ಸರ್ಕಾರದಿಂದ ಚಿಕಿತ್ಸೆ ಮತ್ತು ಪರಿಹಾರ ಒದಗಿಸುವಂತೆ ಮಹತ್ವದ ತೀರ್ಪು ಪ್ರಕಟಿಸಿತ್ತು.

ಬಿಡಿಎ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಅಸಮಾಧಾನ. ಮಾರುವೇಷದಲ್ಲಿ ಕಚೇರಿಗೆ ಹೋಗಿ ಪರಿಶೀಲಿಸುವಂತೆ ಬಿಡಿಎ ಆಯುಕ್ತರಿಗೆ ಸಲಹೆ. ಸುಗ್ರೀವಾಜ್ಞೆ ಮೂಲಕ ಬಿಡಿಎ ಮುಚ್ಚುವುದೇ ಲೇಸು ಎಂದು ಮೌಖಿಕ ಅಭಿಪ್ರಾಯ.

ಕಾನೂನುಬಾಹಿರವಾಗಿ ವೈದ್ಯಕೀಯ ಸ್ನಾತಕೋತ್ತರ ಪದವಿಯ ಸೀಟು ಹಂಚಿಕೆ ಆರೋಪ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 1 ಲಕ್ಷ ರೂ. ದಂಡ ವಿಧಿಸಿದ್ದ ಹೈಕೋರ್ಟ್.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಸೇವೆ (ಬಡ್ತಿ, ಸೇವಾ ಹಿರಿತನ)ಗೆ ಸಂಬಂಧಿಸಿದ ನಿಯಮಗಳ ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರಗಳಿಲ್ಲ ಎಂದು ಹೈಕೋರ್ಟ್ ಆದೇಶ.

ಕ್ರೂರ, ಅಪಾಯಕಾರಿ ಶ್ವಾನ ತಳಿ ಸಂತಾನೋತ್ಪತ್ತಿ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿದ್ದ ಹೈಕೋರ್ಟ್.

ಮೃತ ಸೈನಿಕನ ವಿಚ್ಛೇದಿತ ಪತ್ನಿಗೆ ಎಲ್ಲ ರೀತಿಯ ವಿಧವಾ ಸೌಲಭ್ಯಗಳನ್ನು ಕಲ್ಪಿಸಲು ಸೇನಾ ಪ್ರಾಧಿಕಾರಕ್ಕೆ ಸೂಚಿಸಿದ್ದ ಹೈಕೋರ್ಟ್.

ಹೈಕೋರ್ಟ್ ನ್ಯಾಯಪೀಠದ ಮುಂದೆ ಕತ್ತಿಗೆ ಗಾಯ ಮಾಡಿಕೊಂಡ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು.

ಶ್ರವಣದೋಷವುಳ್ಳ ವಕೀಲರಿಗೆ ನೆರವಾಗಲು ಅರ್ಥ ನಿರೂಪಣಾಕಾರರ ನೇಮಕ ಮಾಡಿ ಪ್ರಕರಣದ ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ ಹೈಕೋರ್ಟ್.

ನ್ಯಾಯಾಲಯದ ಆದೇಶ ಪಾಲಿಸದ ಸರ್ಕಾರದ ಪ್ರಾಧಿಕಾರಗಳು ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡು ಸರ್ಕಾರದ ಪ್ರತಿಕ್ರಿಯೆ ಕೇಳಿದ್ದ ಹೈಕೋರ್ಟ್
ಸರ್ಕಾರಿ ಕೋಟಾದಡಿ ಪದವಿ ಪಡೆದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ ಎಂದು ಹೈಕೋರ್ಟ್ ಆದೇಶ.

ವಿದ್ಯುತ್ ಸ್ಪರ್ಶದಿಂದ ಆನೆ ಸೇರಿ ವನ್ಯಜೀವಿಗಳ ಸಾವು ಕುರಿತಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್, ಸರ್ಕಾರದಿಂದ ಮಾಹಿತಿ ನೀಡಲು ಸೂಚನೆ ನೀಡಿತ್ತು.
ವಿದೇಶಿಯರಿಗೆ ವೈದ್ಯಕೀಯ ವೀಸಾ ನೀಡುವುದಕ್ಕೂ ಮುನ್ನ ಅವರ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತೆ ಪಾಸ್ಪೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದ ಹೈಕೋರ್ಟ್
2020ರಲ್ಲಿ ನಟಿ ಸಂಜನಾ ಗಲ್ರಾಣಿ ಮತ್ತಿತರರ ವಿರುದ್ಧ ದಾಖಲಾಗಿದ್ದ ಮಾದಕ ದ್ರವ್ಯ ಸೇವನೆ ಪ್ರಕರಣ ರದ್ದುಗೊಳಿಸಿ ಆದೇಶಿಸಿದ್ದ ಹೈಕೋರ್ಟ್
ವೇಶ್ಯಾವಾಟಿಕೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಸಂತ್ರಸ್ತೆಯರನ್ನು ಅಭಿಯೋಜನೆಗೆ ಗುರಿಪಡಿಸಲಾಗದು ಎಂದು ಆದೇಶಿಸಿದ್ದ ಹೈಕೋರ್ಟ್
ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿ ಶ್ರೀಕಿ ಸೇರಿ ಇಬ್ಬರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ(ಕೋಕಾ) ವಿಧಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್
ವಿದ್ಯಾರ್ಥಿಯೊಂದಿಗೆ ಅಸಹಜ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಮುಖ್ಯ ಶಿಕ್ಷಕಿ ನಡೆಗೆ ಹೈಕೋರ್ಟ್ ಅಸಮಾಧಾನ.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯಡಿ ಮಂಜೂರಾದ ಜಮೀನನ್ನು ಜಿಪಿಎ ಮಾಡಿಕೊಂಡು ಸೊಸೈಟಿಯಿಂದ ಪಡೆದ ಸಾಲಕ್ಕೆ ಜಪ್ತಿ ಮಾಡಲಾಗದು ಎಂದು ಆದೇಶಿಸಿದ್ದ ಹೈಕೋರ್ಟ್
ನಿವೃತ್ತಿ ನಂತರ ಸೇವಾ ಅವಧಿ ವಿಸ್ತರಣೆಗಾಗಿ ಜನ್ಮ ದಿನ ಬದಲಾವಣೆ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ.

ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮಾಡುವುದು ಸಾಮರಸ್ಯ ಉತ್ತೇಜಿಸುವ ಸಂಕೇತವಾಗಿರಲಿದೆ ಎಂದು ಹೈಕೋರ್ಟ್ ಆದೇಶ.
ಅರ್ಹತೆ ಇದ್ದರೂ ವೈದ್ಯಕೀಯ ಸೀಟು ನೀಡದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಅಂತಾರಾಷ್ಟ್ರೀಯ ಚೆಸ್ ಪಟುವಿಗೆ Rs. 10 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಒಂದು ಹಕ್ಕು, ಈ ವೇಳೆ ಸಣ್ಣ ಹಾನಿಯಾಗುವುದು ಸಾಮಾನ್ಯ ಎಂದು ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿರುವ ಹೈಕೋರ್ಟ್
ವಿದ್ಯಾರ್ಥಿಗೆ ಆತ್ಮಹತ್ಯೆ ಪ್ರಚೋದನೆ ನೀಡುವ ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಮಕ್ಕಳ ಜೀವಕ್ಕೆ ಹಾನಿಯಾಗುವ ಕೃತ್ಯಗಳಿಗೆ ಮುಂದಾಗಬಾರದು ಎಂದು ಶಿಕ್ಷಕರಿಗೆ ಸಲಹೆ ನೀಡಿದ್ದ ಹೈಕೋರ್ಟ್
ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳ ಕುರಿತಂತೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಸರ್ಕಾರದ ಪ್ರತಿಕ್ರಿಯೆ ಕೇಳಿದ್ದ ಹೈಕೋರ್ಟ್.

ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್
ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಕೊಲೆ ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್.
ಅಪಘಾತ ಸಂಭವಿಸಿದಾಗ ವಾಹನಕ್ಕೆ ಪರವಾನಗಿ, ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದಿದ್ದರೂ ಸಂತ್ರಸ್ತರಿಗೆ ವಿಮಾ ಕಂಪನಿ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶ.
ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಜಾರಿ ಬಳಿಕ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗದು ಎಂದು ತಿಳಿಸಿದ್ದ ಹೈಕೋರ್ಟ್.

ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿರುವ ಕಾರಣ ಪತ್ನಿಯನ್ನೂ ಸಹ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿ (ಎನ್ಎಸ್ಎಲ್ಯು) ಯಲ್ಲಿ ತೃತೀಯ ಲಿಂಗಿಗಳಿಗೆ ಶೇ.0.5ರಷ್ಟು ಮೀಸಲಾತಿ ನೀಡುವಂತೆ ಹೈಕೋರ್ಟ್ ಸೂಚನೆ.
ವಾಲ್ಮೀಕಿ ನಿಗಮ ಹಗರಣವನ್ನು ಕೇಂದ್ರ ತನಿಖಾ ದಳದ (ಸಿಬಿಐ) ತನಿಖೆಗೆ ಒಪ್ಪಿಸಬೇಕು ಎಂದು ಯೂನಿಯನ್ ಬ್ಯಾಂಕ್ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್.

ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕರ ವಿರುದ್ಧದ ದಾಖಲಾದ ಸುಳ್ಳು ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್.
ಮದರಸಾದಲ್ಲಿ ಶಿಕ್ಷಕರಿಂದ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಕುರಿತು ಪ್ರಕರಣ ದಾಖಲಿಸದ ಮದರಸಾ ಸಂಸ್ಥಾಪಕನ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್.

ಹೈಕೋರ್ಟ್ ನೀಡಿದ್ದ ಪ್ರಮುಖ ಆದೇಶಗಳು ಈ ಕೆಳಕಂಡಂತಿದೆ ನೋಡಿ…
ಮಲಗುಂಡಿ ಸ್ವಚ್ಛತೆಗೆ ತಳ ಸಮುದಾಯದವರ ಬಳಕೆ ಮಾಡಿಕೊಂಡಿರುವ ಕುರಿತಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿತ್ತು.

ಮೃತ ಪುತ್ರನಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು ಇದೆ ಎಂದಾದರೆ ಹೆಣ್ಣು ಮಕ್ಕಳಿಗೂ ಅದು ಅನ್ವಯವಾಗುತ್ತದೆ. ಆದ್ದರಿಂದ ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣು ಮಕ್ಕಳಿಗೂ ಸಮಾನ ಪಾಲು ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.

ಕೃಷ್ಣರಾಜ ಸಾಗರ (ಕೆಆರ್ಎಸ್) ಅಣೆಕಟ್ಟೆ ಸುತ್ತ 30 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಆದೇಶ. ಸೇನೆಯಲ್ಲಿನ ನರ್ಸಿಂಗ್ ಸೇವೆಗೆ ಮಹಿಳೆಯರಿಗೆ ಮಾತ್ರ ಇದ್ದ ಅವಕಾಶ ರದ್ದುಗೊಳಿಸಿದ್ದಲ್ಲದೇ, ಈ ರೀತಿಯ ಮೀಸಲಾತಿ ಸಂವಿಧಾನದ ಪರಿಚ್ಛೇದ 14 ಮತ್ತು 16(2)ಕ್ಕೆ ವಿರುದ್ಧ ಎಂದು ಸಾರಿದ್ದ ಹೈಕೋರ್ಟ್.

ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿದರೆ ಜನ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದ ಹೈಕೋರ್ಟ್, ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್ ನಿರ್ಮಿಸಿದರೆ ಜನರು ಏನು ಮಾಡಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ರಾಜ್ಯದಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದ್ದ ಹೈಕೋರ್ಟ್.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.