ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಕೇಸ್: ತೀರ್ಪು ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ವಿಸ್ತರಣೆ
ಬೆಂಗಳೂರು: ನಿವೃತ್ತ ಲೋಕಾಯುಕ್ತ ನ್ಯಾ.ವೈ. ಭಾಸ್ಕರ್ ರಾವ್ ಅವರ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದ ಹೈಕೋರ್ಟ್, ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಸೆಪ್ಟಂಬರ್ 11ರವರೆಗೆ ವಿಸ್ತರಿಸಿದೆ
ಆರೋಪಿ ಅಶೋಕ್ ಕುಮಾರ್ ಎಂಬುವವರು ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸ್ ಐಟಿ ತನಿಖಾಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ತಕರಾರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಆರ್. ನಾಗೇಂದ್ರ ನಾಯಕ್ ಹಾಜರಾಗಿ, ಪ್ರಕರಣದಲ್ಲಿ ಎಸ್ಐಟಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದೇ ಪ್ರಕರಣದ ಇತರೆ ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ಸಂಬಂಧ ವಿಚಾರಣಾ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸದಂತೆ ಹೈಕೋರ್ಟ್ ನ ಮತ್ತೊಂದು ನ್ಯಾಯಪೀಠ ಮಧ್ಯಂತರ ಆದೇಶ ಮಾಡಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಅಶೋಕ್ ಕುಮಾರ್ ಅವರ ಅರ್ಜಿಯನ್ನು ಪ್ರಕರಣದ ಇತರೆ ಆರೋಪಿಗಳು ಸಲ್ಲಿಸಿರುವ ಅರ್ಜಿಯೊಂದಿಗೆ ವಿಚಾರಣೆಗೆ ನಿಗದಿಪಡಿಸಬೇಕು ಎಂದು ರಿಜಿಸ್ಟ್ರಿಗೆ ಸೂಚಿಸಿ ವಿಚಾರಣೆಯನ್ನು ಸೆಪ್ಟಂಬರ್ 11ಕ್ಕೆ ಮುಂದೂಡಿತು.
ಅಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯವು ತೀರ್ಪು ಪ್ರಕಟಿಸದಂತೆ ಹೈಕೋರ್ಟ್ ಮತ್ತೊಂದು ನ್ಯಾಯಪೀಠ ನೀಡಿರುವ ಆದೇಶವನ್ನು ವಿಸ್ತರಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ