ನ್ಯಾಯಾಲಯ ನಿಂದನೆ ಪ್ರಕರಣ – ಬೇಷರತ್ ಕ್ಷಮೆಗೆ ಸುಪ್ರೀಂ ಸೂಚನೆ
ನವದೆಹಲಿ: ನ್ಯಾಯಮೂರ್ತಿಗಳನ್ನು ನಿಂದಿಸಿ ನ್ಯಾಯಾಲಯ ನಿಂದನೆ ಎಸಗಿ ದೆಹಲಿ ಹೈಕೋರ್ಟ್ ನಿಂದ ಆರು ತಿಂಗಳು ಜೈಲು ಶಿಕ್ಷೆಗೆ ಒಳಗಾಗಿರುವ ವಕೀಲರೊಬ್ಬರಿಗೆ ಅದೇ ನ್ಯಾಯಮೂರ್ತಿಗಳ ಮುಂದೆ ಹಾಜರಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ, ನ್ಯಾ.ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಈ ಆದೇಶ ನೀಡಿದೆ.
ಜೈಲು ಶಿಕ್ಷೆಗೆ ಒಳಗಾಗಿರುವ ಅರ್ಜಿದಾರರು ಯಾವ ನ್ಯಾಯಮೂರ್ತಿಗಳನ್ನು ನಿಂದಿಸಿದ್ದಾರೆಯೋ ಅವರ ಮುಂದೆ ಜನವರಿ 16 ರಂದು ಖುದ್ದಾಗಿ ಹಾಜರಾಗಿ ಬೇಷರತ್ತು ಕ್ಷಮೆ ಯಾಚಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ದಾವೆಯೊಂದರಲ್ಲಿ ವಾದಿಸುತ್ತಿದ್ದ ವಕೀಲರೊಬ್ಬರು ವಾದ ಆಲಿಸುತ್ತಿದ್ದ ನ್ಯಾಯಮೂರ್ತಿಗಳನ್ನು ನಿಂದಿಸಿದ್ದರು. ನ್ಯಾಯಮೂರ್ತಿಗಳು ಈ ಬಗ್ಗೆ ಎಚ್ಚರಿಕೆ ನೀಡಿದರೂ ತಮ್ಮ ಹೇಳಿಕೆಗೆ ತಾವು ಬದ್ಧರಾಗಿರುವುದಾಗಿ ಹೇಳಿದ್ದರು. ನ್ಯಾಯಮೂರ್ತಿಗಳನ್ನು ನಿಂದಿಸುವಾಗ ನ್ಯಾಯಮೂರ್ತಿಗಳ ಹೆಸರನ್ನು ಪ್ರಸ್ತಾಪಿಸಿದ್ದರು. ನಿಯಮಗಳ ಪ್ರಕಾರ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳ ಅನ್ವಯ ವಿಚಾರಣೆ ನಡೆಯುತ್ತಿಲ್ಲ ಎಂದಿದ್ದರು. ನ್ಯಾಯಾಲಯ ನಿಂದನೆಗಾಗಿ ನ್ಯಾಯಮೂರ್ತಿಗಳು ಈ ವಕೀಲರಿಗೆ ಜನವರಿ 9 ರಂದು ಆರು ತಿಂಗಳ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.
ತಮ್ಮ ಕಕ್ಷಿದಾರ ವಕೀಲರಿಗೆ ಅವರ ತಪ್ಪಿನ ಅರಿವಾಗಿದೆ. ಇದರಿಂದ ಪಾಠ ಕಲಿತಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಇಳಿಸುವಂತೆ ಹಿರಿಯ ವಕೀಲರಾದ ವಿಭಾ ದತ್ತ ಮಖಿಜಾ ಅವರು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ