23/12/2024

Law Guide Kannada

Online Guide

ಅಪ್ರಾಪ್ತ ಪತ್ನಿ ಜೊತೆ ಸಮ್ಮತಿ ಲೈಂಗಿಕತೆ ಅತ್ಯಾಚಾರಕ್ಕೆ ಸಮ- ಹೈಕೋರ್ಟ್

ಮುಂಬೈ: ಅಪ್ರಾಪ್ತ ಪತ್ನಿಯ ಜೊತೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ 10 ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ಎತ್ತಿ ಹಿಡಿದ ಬಾಂಬೆ ಹೈಕೋರ್ಟ್ ನಾಗಪುರ ವಿಭಾಗೀಯ ಪೀಠದ ನ್ಯಾ. ಜಿ.ಎ. ಸನಪ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆಗೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ .

ಅಪ್ರಾಪ್ತ ಪತ್ನಿಯೊಂದಿಗೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ ಎಂದು ಪರಿಗಣಿಸಲಾಗುವುದು. ಪತ್ನಿಯ ವಯಸ್ಸು 18 ಮೀರಿರಬೇಕು, ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ, ಪ್ರಕರಣ ದಾಖಲಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಸಂತ್ರಸ್ತೆ ತನ್ನ ಪತ್ನಿಯೇ ಆಗಿದ್ದರೂ ಅಪ್ರಾಪ್ತಿಯ ಜೊತೆಗಿನ ಲೈಂಗಿಕ ಕ್ರಿಯೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ
ಮಹಾರಾಷ್ಟ್ರದ ವಾರ್ಧಾದ ನಿವಾಸಿಯಾಗಿರುವ ಸಂತ್ರಸ್ತೆಯನ್ನು ನೆರ ಮನೆಯ ಆರೋಪಿ ಪ್ರೀತಿಸುತ್ತಿದ್ದ. ಈ ಮಧ್ಯೆ ಮೂರು ನಾಲ್ಕು ವರ್ಷಗಳ ಕಾಲ ಪ್ರೀತಿಯಲ್ಲಿದ್ದರೂ ಲೈಂಗಿಕ ಕ್ರಿಯೆಗೆ ಸಂತ್ರಸ್ತೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.

2019ರಲ್ಲಿ ಆರೋಪಿಯು ನೆರೆ ಹೊರೆಯ ಕೆಲವೇ ಕೆಲವು ನಿವಾಸಿಗಳ ಸಮ್ಮುಖದಲ್ಲಿ ಬಾಡಿಗೆ ಕೋಣೆಯಲ್ಲಿ ನಕಲಿ ಮದುವೆ ಕಾರ್ಯಕ್ರಮವನ್ನು ಆಯೋಜಿಸಿ ಸಂತ್ರಸ್ತೆಯನ್ನು ವಿವಾಹವಾಗಿದ್ದನು . ಬಳಿಕ ಆರೋಪಿ ಸಂತ್ರಸ್ತೆಯ ಮೇಲೆ ದೌರ್ಜನ್ಯ ಎಸಗಿದ್ದು, ಇದರಲ್ಲಿ ದೈಹಿಕ ಹಲ್ಲೆ ಮತ್ತು ಗರ್ಭಪಾತವೂ ಸೇರಿದೆ. ಅಲ್ಲದೆ, ಮಗುವಾದ ಬಳಿಕ ಅದರ ತಂದೆ ನಾನಲ್ಲ ಎಂದೂ ಸಹ ಹೇಳಿದ್ದ. ಈ ಹಿನ್ನೆಲೆಯಲ್ಲಿ 2019ರ ಮೇ ತಿಂಗಳಿನಲ್ಲಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ತಮ್ಮಿಬ್ಬರ ಲೈಂಗಿಕತೆಯು ಸಂಪೂರ್ಣ ಒಪ್ಪಿಗೆಯಿಂದ ನಡೆದಿತ್ತು. ಮತ್ತು ಆರೋಪಿ ತನ್ನ ಹೆಂಡತಿ ಎಂದು ಆತ ಅಭಿರಕ್ಷೆ ಪಡೆದುಕೊಂಡಿದ್ದ. ಆದರೆ, ಈ ಡಿಫೆನ್ಸ್ ನ್ನು ತಳ್ಳಿ ಹಾಕಿದ ನ್ಯಾಯಪೀಠ, ಆರೋಪಿ ಮತ್ತು ಸಂತ್ರಸ್ತೆ ಸಂಬಂಧದಿಂದ ಜನಿಸಿದ ಮಗುವಿನ ಜೈವಿಕ ಪೋಷಕರು ಅವರೇ ಎಂದು ಡಿಎನ್ಎ ದೃಢಪಡಿಸಿದೆ ಎಂಬುದನ್ನು ಗಮನಿಸಿದ್ದು ಈ ತೀರ್ಪು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.