23/12/2024

Law Guide Kannada

Online Guide

ವಂಚನೆ ಉದ್ದೇಶವಿಲ್ಲದ ಸಹಮತದ ದೈಹಿಕ ಸಂಬಂಧ ಅತ್ಯಾಚಾರವಲ್ಲ – ಹೈಕೋರ್ಟ್

ಅಲಹಾಬಾದ್: ವಂಚನೆ ಉದ್ದೇಶವಿಲ್ಲದ ಸಹಮತದ ದೈಹಿಕ ಸಂಬಂಧವು ಅತ್ಯಾಚಾರವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ತನ್ನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಮತ್ತು ಸುಲಿಗೆ ಪ್ರಕರಣವನ್ನು ಪ್ರಶ್ನಿಸಿ ಶ್ರೇಯ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಅನೀಶ್ ಕುಮಾರ್ ಗುಪ್ತಾ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಅರ್ಜಿದಾರರ ವಿರುದ್ದ ಪ್ರಕರಣವನ್ನ ರದ್ದುಗೊಳಿಸಿದೆ. ಅಲ್ಲದೆ ಆರಂಭದಿಂದಲೂ ವಂಚನೆಯ ಉದ್ದೇಶ ಇಲ್ಲದೇ ಇದ್ದರೆ, ಸಹಮತದ ಆಧಾರದ ವಿವಾಹೇತರ ದೈಹಿಕ ಸಂಬಂಧವು ಅತ್ಯಾಚಾರವಲ್ಲ ಎಂದು ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ…
ತನ್ನ ಪತಿಯ ಮರಣದ ನಂತರ, ಮದುವೆ ಆಗುವ ಭರವಸೆ ನೀಡಿ ಶ್ರೇಯ್ ಅವರು ತನ್ನ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಸಂತ್ರಸ್ತ ಮಹಿಳೆ ಮೊರದಾಬಾದ್ನಲ್ಲಿ ದೂರು ದಾಖಲಿಸಿದ್ದರು. ಮದುವೆಯಾಗುವುದಾಗಿ ಮತ್ತೆ ಮತ್ತೆ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಬಂಧ ಬೆಳೆಸಿದ್ದಾರೆ. ನಂತರ ಮಾತಿಗೆ ತಪ್ಪಿದ ಶ್ರೇಯ್ ಬೇರೊಬ್ಬ ಮಹಿಳೆಯ ಜೊತೆಗೆ ವಿವಾಹವಾಗಿ ತನಗೆ ಮೋಸ ಮಾಡಿದ್ದಾರೆ. ಜೊತೆಗೆ 50 ಲಕ್ಷ ರೂ. ನೀಡದೇ ಇದ್ದರೆ, ಖಾಸಗಿ ಕ್ಷಣಗಳ ದೃಶ್ಯಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಶ್ರೇಯ್ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಶ್ರೇಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ದೂರು ನೀಡಿರುವ ಮಹಿಳೆಯು ವಿಧವೆ. ಆರೋಪಿ ಶ್ರೇಯ್ ಅವರು 12-13 ವರ್ಷಗಳಿಂದ ಆ ಮಹಿಳೆಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದಾರೆ. ಮಹಿಳೆಯ ಪತಿ ಬದುಕಿದ್ದಾಗಲೂ ಶ್ರೇಯ್ ಅವರು ಮಹಿಳೆಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದರು ಎಂಬುದನ್ನು ಕೋರ್ಟ್ ಗಮನಿಸಿತು. ‘ನಯೀಂ ಅಹಮದ್ ಗಿs ಹರಿಯಾಣ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಪೊಲೀಸರು ಹಾಕಿದ್ದ ಪ್ರಕರಣ ಮತ್ತು ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿತು.

ಮದುವೆ ಆಗುವುದಾಗಿ ಭರವಸೆ ನೀಡಿ, ನಂತರ ಅದನ್ನು ಉಳಿಸಿಕೊಳ್ಳಲಾಗದ ಪ್ರತೀ ಪ್ರಕರಣವನ್ನೂ ಸುಳ್ಳು ಭರವಸೆ ಎಂದು ಪರಿಗಣಿಸಿ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸುವುದು ವಿವೇಕದ ಕೆಲಸ ಆಗುವುದಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿತು.

 

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.