ಚೆಕ್ ಬೌನ್ಸ್ ಕೇಸ್ : ಆರೋಪಿಗೆ 2.50 ಲಕ್ಷ ರೂ. ದಂಡ 1 ವರ್ಷ ಜೈಲುಶಿಕ್ಷೆ ಪ್ರಕಟ
ಬಂಟ್ವಾಳ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುದು ಗ್ರಾಮದ ಅರೋಪಿ ಹಸನಬ್ಬ ಎಂಬುವವರಿಗೆ2.50 ಲಕ್ಷ ರೂ. ದಂಡ 1 ವರ್ಷ ಜೈಲುಶಿಕ್ಷೆ ವಿಧಿಸಿ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ…
ಆರೋಪಿ ಹಸನಬ್ಬ ಅವರು 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಫರಂಗಿಪೇಟೆ ಶಾಖೆಯಿಂದ ಅಡವು ಸಾಲ ಪಡೆದುಕೊಂಡಿದ್ದರು. ಆದರೆ ಆರೋಪಿ ಬ್ಯಾಂಕಿನಿಂದ ಸಾಲ ಪಡೆದಕೊಂಡ ಬಳಿಕ ಸರಿಯಾದ ಸಮಯಕ್ಕೆ ಹಣ ಮರುಪಾವತಿಸದೆ ಸಾಲವನ್ನು ಸುಸ್ತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆರೋಪಿ ವಿರುದ್ಧ ಸಹಕಾರಿ ಕಾಯ್ದೆಯನ್ವಯ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. 2019ರಲ್ಲಿ ಆರೋಪಿಯ ಆಸ್ತಿಯನ್ನು ಹರಾಜಿಗಿಡುವ ಸಂದರ್ಭದಲ್ಲಿ ಹಸನಬ್ಬ ಶಾಖೆಗೆ ಆಗಮಿಸಿ ಸಾಲದ ಭಾಗಶಃ ಬಾಕಿಗೆ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಕೋರ್ಟ್ ಮೊರೆ ಹೋಗಿತ್ತು.
ಈ ವೇಳೆ ಹಸನಬ್ಬ ನಾನು ಫಿರ್ಯಾದಿ ಬ್ಯಾಂಕ್ ನಲ್ಲಿ ಯಾವುದೇ ಲೋನ್ ಪಡೆದಿಲ್ಲ. ಅಲ್ಲದೆ ಯಾವುದೇ ಚೆಕ್ ನೀಡಿಲ್ಲ. ಹೀಗಾಗಿ ನಾನು ಬ್ಯಾಂಕಿಗೆ ಯಾವುದೇ ಹಣ ಕಟ್ಟಲು ಬಾಕಿ ಇಲ್ಲ ಎಂದು ಆರೋಪಿ ನ್ಯಾಯಾಲಯಕ್ಕೆ ಸಾಕ್ಷಿ ನೀಡಿದ್ದನು. ಅಲ್ಲದೆ, ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಸುಳ್ಳು ಆರೋಪ ಮಾಡಿದ್ದ.
ಆದರೆ, 2019ರಲ್ಲಿ ಇದೇ ಆರೋಪಿ ತನ್ನ ಆಸ್ತಿಯ ಹರಾಜಿಗಿಟ್ಟ ಸಂದರ್ಭದಲ್ಲಿ ನೀಡಲಾಗಿದ್ದ ಮನವಿ ಪತ್ರವನ್ನು ಹಾಗೂ ಸಾಲದ ತಖ್ಯೆ ಸಹಿತ ದಾಖಲೆಗಳನ್ನು ಪರಿಗಣಿಸಿದ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯಮ್ಮ ಅವರಿದ್ದ ನ್ಯಾಯಪೀಠ, ಆರೋಪಿ ಸದರಿ ಪ್ರಕರಣದ ಅಪರಾಧಿ ಎಂದು ಘೋಷಿಸಿದರು.
ಅಲ್ಲದೆ ಪ್ರಕರಣ ಸಂಬಂಧ ಅಪರಾಧಿ ಹಸನಬ್ಬ ಅವರು ಫಿರ್ಯಾದಿ ಬ್ಯಾಂಕಿಗೆ ರೂ. 2,50,000/- ಪರಿಹಾರ ನೀಡಬೇಕು, ಜೊತೆಗೆ ರೂ. 10,000/- ದಂಡ ಪಾವತಿಸಬೇಕು ಹಾಗೂ ಇದಕ್ಕೆ ತಪ್ಪಿದ್ದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಪೀಠ ತೀರ್ಪು ಪ್ರಕಟಿಸಿತು . ಫಿರ್ಯಾದಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಪರ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ