23/12/2024

Law Guide Kannada

Online Guide

50 ವರ್ಷ ಮೇಲ್ಪಟ್ಟ ಶಿಕ್ಷಕಿಯರ ವರ್ಗಾವಣೆ ರದ್ದು: ಕೆಎಟಿ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಐವತ್ತು ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ಇದ್ದರೂ ಸಹ 55 ವರ್ಷ ಹಾಗೂ 58 ವರ್ಷದ ಇಬ್ಬರು ಮಹಿಳಾ ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನ ರದ್ದುಗೊಳಿಸಿದ್ದ ಕೆಎಟಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ನಿಯಮಗಳ ಪ್ರಕಾರ 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ಮಾಡುವಂತಿಲ್ಲ. ನಿಯಮಗಳಲ್ಲಿ ವರ್ಗಾವಣೆ ಮಾಡುವುದಕ್ಕೆ ವಿನಾಯಿತಿ ಇದ್ದಾಗ ನೌಕರರು ಅರ್ಜಿ ಸಲ್ಲಿಸಲಿ ಅಥವಾ ಬಿಡಲಿ, ಚಾಲ್ತಿಯಲ್ಲಿ ಇರುವಂತಹ ನಿಯಮವನ್ನು ಅಧಿಕಾರಿಗಳು ಜಾರಿಗೊಳಿಸಬೇಕು’ ಎಂದು ಕಟ್ಟುನಿಟ್ಟಾಗಿ ಹೈಕೋರ್ಟ್ ಆದೇಶಿಸಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬೂದಿಹಾಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಮಾದೇವಿ ಹುಂಡೇಕರ್ (55) ಮತ್ತು ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ಪ್ರಭಾವತಿ ರೋಣದ (58) ಅವರನ್ನು ಹೆಚ್ಚುವರಿ ಶಿಕ್ಷಕರೆಂದು ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ) ಮೊರೆ ಹೋಗಿದ್ದರು. ಕೆಎಟಿಯು ಅರ್ಜಿ ಮಾನ್ಯ ಮಾಡುವ ಮೂಲಕ ವರ್ಗಾವಣೆ ಆದೇಶವನ್ನು ರದ್ದು ಮಾಡಿತ್ತು.

ಕೆಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸರ್ಕಾರ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, 50 ವರ್ಷ ಮೇಲ್ಪಟ್ಟ ಮಹಿಳಾ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಕರ್ನಾಟಕ ಸ್ಟೇಟ್ ಸಿವಿಲ್ ಸರ್ವೀಸಸ್ (ರೆಗ್ಯುಲೇಷನ್ ಆಫ್ ಟ್ರಾನ್ಸಫರ್ ಆಫ್ ಟೀಚರ್ಸ್) ಆಕ್ಟ್ ನ ನಿಯಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಅಲ್ಲದೇ, 50 ವರ್ಷ ದಾಟಿದ್ದ ಇಬ್ಬರು ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದ ಶಿಕ್ಷಣ ಇಲಾಖೆ ಆಯುಕ್ತರ ಆದೇಶವನ್ನು ರದ್ದು ಮಾಡಿದ್ದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ತೆಎಸ್ಎಟಿ) ಆದೇಶವನ್ನು ಎತ್ತಿಹಿಡಿದಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರತಿವಾದಿಗಳಾಗಿರುವ ಇಬ್ಬರು ಶಿಕ್ಷಕಿಯರಾದ ಉಮಾದೇವಿ ಹು0ಡೇಕರ್ ಅವರು 55 ವರ್ಷ ದಾಟಿದ್ದರೆ, ಪ್ರಭಾವತಿ ರೋನದ್ ಅವರು 58 ವರ್ಷ ವಯಸ್ಸು ದಾಟಿದ್ದಾರೆ. ಕರ್ನಾಟಕ ಸ್ಟೇಟ್ ಸಿವಿಲ್ ಸರ್ವೀಸಸ್ (ರೆಗ್ಯೂಲೇಷನ್ ಆಫ್ ಟ್ರಾನ್ಸಫರ್ ಆಫ್ ಟೀಚರ್ಸ್) ಆಕ್ಟ್ 2020ರ ಸೆಕ್ಟನ್ 10(1)(6) ಅಡಿಯಲ್ಲಿ 50 ವರ್ಷ ದಾಟಿರುವ ಮಹಿಳಾ ಶಿಕ್ಷಕರಿಗೆ ಹಾಗೂ 55 ವರ್ಷ ವಯೋಮಿತಿ ದಾಟಿರುವ ಪುರುಷ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಶಿಕ್ಷಕಿಯರ ಕೋರಿಗೆ ಮೇರೆಗೆ ವರ್ಗಾವಣೆಯನ್ನು ರದ್ದುಪಡಿಸಿರುವ ಕೆಎಟಿ ಆದೇಶ ಸರಿಯಿದ್ದು ಅದರಲ್ಲಿ ಮಧ್ಯಪ್ರವೇಶಿಸುವ ಯಾವುದೇ ಸಕಾರಣವಿಲ್ಲ ಎಂದು ಹೈಕೋರ್ಟ್ ಪೀಠ ತಿಳಿಸಿದೆ.

ಅಲ್ಲದೇ, ಯಾವುದೇ ಶಾಸನಾತ್ಮಕ ನಿಯಮ ಜಾರಿ ಮಾಡಿದಾಗ ಅದರ ಉಪಯೋಗ ಕೋರಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೋ ಇಲ್ಲವೋ ಎ0ಬುದನ್ನು ಪರಿಗಣಿಸದೇ ಅದರ ಉಪಯೋಗವನ್ನು ಪ್ರಾಧಿಕಾರಗಳು ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಾಗಲಕೋಟಿ ಜಿಲ್ಲೆ ಬೀಳಗಿ ತಾಲೂಕಿನ ಶಿಕ್ಷಕಿಯರಾದ ಉಮಾದೇವಿ ಹು0ಡೇಕರ್ (55) ಹಾಗೂ ಪ್ರಭಾವತಿ ರೋಣದ್ (58) ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2023ರ ಜೂನ್ 20 ಮತ್ತು 21ರಂದು ವರ್ಗಾವಣೆ ಮಾಡಿದ್ದರು. ಉಮಾದೇವಿ ಹು0ಡೇಕರ್ 30 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರೆ, ಪ್ರಭಾವತಿ ರೋಣದ್ 34 ವರ್ಷ ಶಿಕ್ಷಕಿಯಾಗಿ ಸೇವ ಸಲ್ಲಿಸಿದ್ದರು. ಈ ಇಬ್ಬರೂ ಶಿಕ್ಚಕಿಯರು ಆಯಾ ಶಾಲೆಗಳಿಗೆ ಹೆಚ್ಚುವರಿಯಾಗಿದ್ದಾರೆ0ದು ಪರಿಗಣಿಸಿ ಬೇರೆ ಶಾಲೆಗಳಿಗೆ ವರ್ಗಾಯಿಸಿದ್ದರು. ಇದನ್ನು ಪ್ರಶ್ನಿಸಿ ಇಬ್ಬರೂ ಶಿಕ್ಷಕಿಯರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.