ಸರ್ಕಾರಿ ನೌಕರರ ವಜಾ ಆದೇಶ ರದ್ದು: ನೇಮಕಾತಿ ನಡೆದ ಆರು ತಿಂಗಳ ಒಳಗೆ ದಾಖಲೆ ಪರಿಶೀಲನೆಗೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ: ಸರ್ಕಾರಿ ನೌಕರರ ನೇಮಕಾತಿಯ ಸಂದರ್ಭದಲ್ಲಿ ನೀಡಿದ್ದ ಪೊಲೀಸ್ ವೆರಿಫಿಕೇಶನ್‌ನ್ನು 25 ವರ್ಷಗಳ ಬಳಿಕ ಪೂರ್ಣಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವರದಿಯ ಆಧಾರದಲ್ಲಿ ಸರ್ಕಾರಿ ನೌಕರರನನ್ನು ವಜಾಗೊಳಿಸಿದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳು ಸಲ್ಲಿಸುವ ನಡವಳಿಕೆ, ಪೂರ್ವಾಪರ, ರಾಷ್ಟ್ರೀಯತೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯನ್ನು ನೇಮಕಾತಿ ನಡೆದ ಆರು ತಿಂಗಳ ಒಳಗೆ ನಡೆಸುವಂತೆ ಎಲ್ಲ ರಾಜ್ಯದ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ನಿವೃತ್ತಿಯ ಎರಡು ತಿಂಗಳ ಮುಂಚೆ, ಸಹಾಯಕ ನೇತ್ರ ತಜ್ಞರೊಬ್ಬರನ್ನು ಕೆಲಸದಿಂದ ವಜಾ ಮಾಡಿರುವ ಆದೇಶವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ನ್ಯಾ. ಜೆ.ಕೆ. ಮಾಹೇಶ್ವರಿ ಮತ್ತು ಆರ್. ಮಹಾದೇವನ್ ಅವರಿದ್ದ ನ್ಯಾಯಪೀಠ, ಪೊಲೀಸ್ ಇಲಾಖೆಗೆ ಈ ನಿರ್ದೇಶನ ಹೊರಡಿಸಿದೆ.
ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಂತರವೇ ಸರ್ಕಾರಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ನೀಡಿದೆ.
1985ರ ಮಾರ್ಚ್ 6ರಂದು ಸೇವೆಗೆ ಸೇರಿದ್ದರೂ ಅವರ ಕುರಿತಾದ ಪರಿಶೀಲನಾ ವರದಿಯನ್ನು ಪೊಲೀಸ್ ಇಲಾಖೆಯು 2010ರ ಜುಲೈ 7ರಂದು ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡಿತ್ತು. ಪರಿಶೀಲನಾ ವರದಿ ಇಲಾಖೆಯ ಕೈ ಸೇರಿದಾಗ, ಸಹಾಯಕ ನೇತ್ರ ತಜ್ಞರ ನಿವೃತ್ತಿಗೆ ಎರಡು ತಿಂಗಳಷ್ಟೇ ಬಾಕಿ ಇತ್ತು.
ಸರ್ಕಾರಿ ನೌಕರರ ನೇಮಕಾತಿ ನಡೆದ ಆರು ತಿಂಗಳೊಳಗೆ ಪೊಲೀಸ್ ಪರಿಶೀಲನೆ ನಡೆಸಬೇಕು. ಆ ಬಳಿಕವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ