ಲಂಚ ಪ್ರಕರಣ: ಖಾಸಗಿ ಲ್ಯಾಬ್ ನಲ್ಲಿ ಧ್ವನಿ ಪರೀಕ್ಷೆಗೆ ಹೈಕೋರ್ಟ್ ಆಕ್ಷೇಪ
ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ವನಿ ಮಾದರಿಯನ್ನು ಸರಕಾರಿ ಏಜೆನ್ಸಿ ಬದಲು ಖಾಸಗಿ ಪ್ರಯೋಗಾಲಯದಿಂದ ಪರೀಕ್ಷಿಸಿ ಅದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿ ಸಲ್ಲಿಸಿರುವುದಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಲಂಚ ಪಡೆದಿದ್ದ ಅಧಿಕಾರಿಯ ವಿರುದ್ಧ ಪ್ರಕರಣ ರದ್ದುಪಡಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್, ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಸಂಬಂಧದ ಧ್ವನಿ ಮಾದರಿಯನ್ನು ಸರಕಾರಿ ಏಜೆನ್ಸಿ ಬದಲು ಖಾಸಗಿ ಪ್ರಯೋಗಾಲಯದಿಂದ ಪರೀಕ್ಷಿಸಿ ಅದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿ ಕೋರ್ಟ್ಗೆ ಸಲ್ಲಿಸುವುದು ಆರೋಪಿಗಳ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದೆ.
ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಏನಿದು ಪ್ರಕರಣ
ಚಿಕ್ಕಬಳ್ಳಾಪುರದ ಪಾತಪಾಳ್ಯ ಪೊಲೀಸ್ ಠಾಣೆಯ ಮುಖ್ಯ ಕಾನ್ಸ್ ಟೇಬಲ್ ರಾಮಾಚಾರಿ ಎರವಲು ಸೇವೆಯಲ್ಲಿ ಚಿಕ್ಕಬಳ್ಳಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2014ರಲ್ಲಿ ಚುನಾವಣಾ ಸಮಯದಲ್ಲಿ ವಶಪಡಿಸಿಕೊಂಡ ವಾಹನ ಬಿಡುಗಡೆ ಮಾಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರರು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸ್ ಠಾಣೆಗೆ ಭ್ರಷ್ಟಾಚಾರ ತಡೆ ಕಾಯಿದೆ 1988ರ ಸೆಕ್ಷನ್ 7 ಮತ್ತು ಸೆಕ್ಷನ್ 13(ಬಿ)ರಡಿಯಲ್ಲಿ ದೂರು ದಾಖಲಿಸಿದ್ದರು.
ಆದರೆ ದೂರು ಘಟನೆಯ ಸ್ಥಳದ ವ್ಯಾಪ್ತಿ ಹೊಂದಿರಲಿಲ್ಲ. ಹೀಗಾಗಿ . ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ವರ್ಗಾವಣೆ ಮಾಡದೆ ತಾವೇ ಭಾಗಶಃ ತನಿಖೆ ನಡೆಸಿದ್ದರು. ಈ ನಡುವೆ ಪ್ರಕರಣ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಅದಾದ ಬಳಿಕ ಹೊಸದಾಗಿ ತನಿಖೆ ನಡೆಸದೆ, ಹಿಂದಿನ ಪೊಲೀಸ್ ಅಧಿಕಾರಿಗಳು ನಡೆಸಿದ್ದ ತನಿಖೆಯನ್ನು ಚಿಕ್ಕಬಳ್ಳಾಪುರ ಪೊಲೀಸರು ಮುಂದುವರಿಸಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರು.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ‘ಮೊದಲಿಗೆ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅಲ್ಲಿನ ಇನ್ ಸ್ಪೆಕ್ಟರ್ ಭಾಗಶಃ ತನಿಖೆ ನಡೆಸಿದ್ದರು. ಬಳಿಕ ಪ್ರಕರಣ ಚಿಕ್ಕಬಳ್ಳಾಪುರ ಲೋಕಾಯುಕ್ತ ಠಾಣೆಗೆ ವರ್ಗಾವಣೆಯಾಗಿದೆ. ವರ್ಗಾವಣೆ ಬಳಿಕ ಹೊಸದಾಗಿ ತನಿಖೆ ಆರಂಭಿಸಬೇಕಾಗಿತ್ತು. ಆದರೆ ಚಿಕ್ಕಬಳ್ಳಾಪುರದ ಲೋಕಾಯುಕ್ತ ಪೊಲೀಸರು, ಬೆಂಗಳೂರು ಗ್ರಾಮಾಂತರ ಪೊಲೀಸರು ನಡೆಸಿದ್ದ ತನಿಖೆಯನ್ನೇ ಮುಂದುವರಿಸಿದ್ದಾರೆ. ಇದು ತನಿಖಾ ಪ್ರಕ್ರಿಯೆಗೆ ವಿರುದ್ಧವಾಗಿದೆ,” ಎಂದು ಹೇಳಿತು.
ಖಾಸಗಿ ಏಜೆನ್ಸಿಯೊಂದರಲ್ಲಿ ಧ್ವನಿ ಮಾದರಿಗಳ ಪರಿಶೀಲನೆ ನಡೆಸಲಾಗಿದ್ದು, ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿತ್ತು. ಅದಕ್ಕೆ ಬದಲು ಖಾಸಗಿ ಪ್ರಯೋಗಾಲಯದ ವರದಿಯನ್ನು ಆರೋಪಪಟ್ಟಿಯಲ್ಲಿ ಅಡಕ ಮಾಡುವ ಮೂಲಕ ಆರೋಪಿಗಳ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವಂತೆನೂ ದೋಷಗಳು ಇಲ್ಲ,” ಎಂದು ಅಭಿಪ್ರಾಯಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ