23/12/2024

Law Guide Kannada

Online Guide

ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ಕೋರ್ಟ್ ಗೆ ಫೋರ್ಜರಿ ಮಾಡಲು ಯತ್ನ: ಕೇಸ್ ದಾಖಲು

ಉಡುಪಿ: ಜಾಮೀನುದಾರರು ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ನ್ಯಾಯಾಲಯಕ್ಕೆ ಪೋರ್ಜರಿ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.

ಉಡುಪಿ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ಸಲ್ಲಿಸುವ ಸಂದರ್ಭದಲ್ಲಿ ಜಾಮೀನುದಾರೊಬ್ಬರು ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ನ್ಯಾಯಾಲಯಕ್ಕೆ ಫೋರ್ಜರಿ ಮಾಡಲು ಮುಂದಾಗಿದ್ದರು. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನಕಲಿ ಆಧಾರ್ ಕಾರ್ಡ್ ಸಲ್ಲಿಕೆಯಾಗಿತ್ತು

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ (ಎಫ್ ಟಿಎಸ್ಸಿ)ಯಲ್ಲಿ ವಿಚಾರಣೆ ಹಂತದಲ್ಲಿ ಇದ್ದ ಕೇಸಿನಲ್ಲಿ ಇಬ್ರಾಹಿಂ ಎಂ.ಐ ಮತ್ತು ಎ.ಕೆ. ಹಮೀದ್ ಎಂಬವರು ಕೋರ್ಟ್ ಮುಂದೆ ಹಾಜರಾಗಿ ಆರೋಪಿಗಳ ಪರ ಜಾಮೀನು ನೀಡಲು ಆಧಾರ್ ಕಾರ್ಡ್ನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಈ ನಡುವೆ ಇವರು ಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಹಾಜರುಪಡಿಸಿದ ಆಧಾರ್ ಕಾರ್ಡ್ ನ್ನು ಹಾಗೂ ಈಗ ನ್ಯಾಯಾಧೀಶರಿಗೆ ಸಲ್ಲಿಸಿದ್ದ ಆಧಾರ್ ಕಾರ್ಡ್ಗಳನ್ನು ಪರಿಶೀಲಿಸಿದಾಗ ಸಾಮ್ಯತೆ ಇಲ್ಲದಿರುವುದು ಕಂಡು ಬಂದಿತ್ತು.

ಈ ವೇಳೆ ಕೋರ್ಟಿಗೆ ಮೋಸ ಮಾಡುವ ದುರುದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿರುವುದು ಬಯಲಾಗಿದ್ದು. ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಖ್ಯ ಕಾರ್ಯನಿರ್ವಾಹಕರಾದ ಅಬ್ಬಾಸ್ ಎಸ್. ಅವರು ಈ ಬಗ್ಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.