ಸುಪ್ರೀಂಕೋರ್ಟ್ 51ನೇ CGI ಆಗಿ ನ್ಯಾ.ಸಂಜೀವ್ ಖನ್ನಾ ನೇಮಕ: ನ.11 ರಂದು ಪದಗ್ರಹಣ
ನವದೆಹಲಿ: ಸುಪ್ರೀಂ ಕೋರ್ಟ್ 51 ಸಿಜೆಐ ಆಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನೇಮಕವಾಗಿದ್ದು, ನವೆಂಬರ್ 11 ರಂದು ಪದಗ್ರಹಣ ಮಾಡಲಿದ್ದಾರೆ.
ಭಾರತದ ಸಂವಿಧಾನ ನೀಡಿದ ಅಧಿಕಾರವನ್ನು ಚಲಾಯಿಸಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಸಿಜೆಐ ನೇಮಕಾತಿಗೆ ಅಂಕಿತ ಹಾಕಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಆಗಿರುವ ನ್ಯಾ. ಧನಂಜಯ ವೈ ಚಂದ್ರಚೂಡ್ ಅವರ ಅಧಿಕಾರಾವಧಿ ನವೆಂಬರ್ 10ಕ್ಕೆ ಕೊನೆಗೊಳ್ಳಲಿದೆ. ಚಂದ್ರಚೂಡ್ ಅವರು ಸಂಜೀವ್ ಖನ್ನಾ ಅವರ ಹೆಸರನ್ನು ಸೂಚಿಸಿದ್ದು, ಈ ಹೆಸರಿಗೆ ಕೇಂದ್ರ ಸರ್ಕಾರವೂ ಸಮ್ಮತಿ ಸೂಚಿಸಿದೆ. ನವೆಂಬರ್ 11 ರಂದು ಸಂಜೀವ್ ಖನ್ನ ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರು ಮುಂದಿನ ಏಳು ತಿಂಗಳ ಕಾಲ ಸಿಜೆಐ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೇ 13, 2025ರಂದು ಸಂಜೀವ್ ಖನ್ನ ಅವರು ನಿವೃತ್ತರಾಗಲಿದ್ದಾರೆ. ಸಂಜೀವ್ ಖನ್ನ ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪದನಿಮಿತ್ತ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಜಾಮೀನು, ಆಪ್ ಸಂಸದ ಸಂಜಯ್ ಸಿಂಗ್ ಮಧ್ಯಂತರ ಜಾಮೀನು ಸೇರಿದಂತೆ ಕೆಲ ಮಹತ್ವದ ತೀರ್ಪು ನೀಡಿದ ಪೀಠದಲ್ಲಿ ಸಂಜೀವ್ ಖನ್ನಾ ಕೂಡ ಪ್ರಮುಖ ಭಾಗವಾಗಿದ್ದರು. ಅಲ್ಲದೆ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿಯನ್ನು ಸಂಜೀವ್ ಖನ್ನಾ ಒಳಗೊಂಡ ಪೀಠ ಎತ್ತಿ ಹಿಡಿದಿತ್ತು.
ನ್ಯಾ.ಸಂಜೀವ್ ಖನ್ನಾ ಜೀವನ , ಸಾಧನೆ
1977ರಲ್ಲಿ ನವದೆಹಲಿಯ ಮಾಡರ್ನ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಅವರು ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಕ್ಯಾಂಪಸ್ ಕಾನೂನು ಕೇಂದ್ರದಲ್ಲಿ ಕಾನೂನು ಅಧ್ಯಯನ ಮಾಡಿದ್ದರು.
ಅವರ ತಂದೆ ನ್ಯಾಯಮೂರ್ತಿ ದೇವರಾಜ್ ಖನ್ನ 1985ರಲ್ಲಿ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದವರು. ತಾಯಿ ಸರೋಜ್ ಖನ್ನಾ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನ ಹಿಂದಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು.
1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಸಂಜೀವ್ ಖನ್ನಾ, 2005ರ ಜೂನ್ 24ರಂದು ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನಿಯುಕ್ತರಾದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ