ಹೈಕೋರ್ಟ್ ನ್ಯಾಯಮೂರ್ತಿ ವಿರುದ್ದ ತನಿಖೆಗೆ ಅರ್ಜಿ: ಸುಪ್ರೀಂಕೋರ್ಟ್ ಆಕ್ರೋಶಕ್ಕೆ ಮಣಿದು ಅರ್ಜಿ ವಾಪಸ್
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ವಿರುದ್ಧ ತನಿಖೆ ನಡೆಸುವಂತೆ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ಬಗ್ಗೆ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ವಕೀಲರು ಅರ್ಜಿಯನ್ನ ವಾಪಸ್ ಪಡೆದಿದ್ದಾರೆ
ಮೂರು ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ವಕೀಲ ವಿಶಾಲ್ ಅರುಣ್ ಮಿಶ್ರಾ ಎಂಬವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾ. ಅಭಯ ಶ್ರೀನಿವಾಸ್ ಓಕಾ, ನ್ಯಾ. ಅಹ್ವಾನುದ್ದೀನ್ ಅಮಾನುಲ್ಲ ಮತ್ತು ನ್ಯಾ. ಆಗಸ್ಟಿನ್ ಮಸೀಹ್ ಅವರಿದ್ದ ನ್ಯಾಯಪೀಠವು, ವಕೀಲರ ಅರ್ಜಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಈ ಮನವಿ ಅರ್ಜಿಯು ಕುಟಿಲತೆಯಿಂದ ಕೂಡಿದೆ. ಮತ್ತು ಅರ್ಜಿಯನ್ನು ಸಲ್ಲಿಸುವುದರ ಹಿಂದೆ ಯಾರದೋ ದುಷ್ಪರಣೆ ಅಡಗಿದಂತೆ ಭಾಸವಾಗುತ್ತಿದೆ. ಅರ್ಜಿಯಲ್ಲಿ ಎಲ್ಲ ಖಾಸಗಿ ಪಕ್ಷಕಾರರ ವಿರುದ್ಧ ಆಪಾದನೆಗಳನ್ನು ಮಾಡಲಾಗಿದೆ. ಮತ್ತು ನ್ಯಾಯಮೂರ್ತಿಗಳ ಮೇಲೆ ಸಂಶಯದ ನೋಟ ಬೀರಲಾಗಿದೆ. ಇದರ ಅಗತ್ಯವೇನು..? ಎಂದು ಕೆಂಡಾಮಂಡಲವಾದ ನ್ಯಾಯಪೀಠ, ಈ ಅರ್ಜಿಯನ್ನು ಸಲ್ಲಿಸಿರುವ ರೀತಿಯೇ ಆಕ್ಷೇಪಾರ್ಹವಾಗಿದೆ. ನಿಮ್ಮ ಪ್ರಕಾರ, ನ್ಯಾಯಮೂರ್ತಿಗಳು ದುರ್ಬಲರೇ..? ನ್ಯಾಯಾಂಗದ ಫಲಿತಾಂಶಗಳ ಮೇಲೆ ಲೋಕಾಯುಕ್ತರು ಪ್ರಭಾವ ಬೀರಬಹುದು ಎಂದು ಭಾವಿಸಿದ್ದೀರಾ..? ಎಂದು ನ್ಯಾಯಪೀಠ ಅರ್ಜಿದಾರರ ಪರ ವಕೀಲರಿಗೆ ಕಟುಪ್ರಶ್ನೆ ಹಾಕಿತು.
ಗೌರವಾನ್ವಿತ ನ್ಯಾಯಮೂರ್ತಿಗಳು ಸಂಜೆ ಏಳು ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಾರೆ. ನೀವು ಅದರ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಓಕಾ ಅಸಮಾಧಾನ ವ್ಯಕ್ತಪಡಿಸಿದರು.
ಹಾಗೆಯೇ ಹೈಕೋರ್ಟ್ ನ್ಯಾಯಮೂರ್ತಿಗಳ ವಿವೇಚನೆ ಬಗ್ಗೆ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ನುಡಿಯಿತು. ಅರ್ಜಿಯಲ್ಲಿ ನಮೂದಿಸಿದ ಅಂಶಗಳ ಬಗ್ಗೆ ನ್ಯಾಯಪೀಠಕ್ಕೆ ಮೇಲ್ನೋಟಕ್ಕೆ ತೃಪ್ತಿಯಿಲ್ಲ ಎಂಬುದನ್ನು ನ್ಯಾಯಪೀಠದಲ್ಲಿ ಓರ್ವ ಸದಸ್ಯರಾಗಿದ್ದ ಅಮಾನುಲ್ಲ ಅಭಿಪ್ರಾಯಪಟ್ಟರು.
ನಿಮ್ಮ ಬಳಿ ಕೆಲವು ದೊಡ್ಡ ಆಧಾರಗಳು ಇರಬಹುದು. ಆದರೆ, ಮಾನ್ಯ ನ್ಯಾಯಮೂರ್ತಿಗಳ ವಿವೇಚನೆಯನ್ನು ನಾವು ತನಿಖೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಕಟುಶಬ್ದಗಳಿಂದ ನುಡಿದ ಬಳಿಕ ಅರ್ಜಿದಾರರು ತಮ್ಮ ಮನವಿಯನ್ನು ಹಿಂದಕ್ಕೆ ಪಡೆಯಲು ನ್ಯಾಯಾಲಯದ ಅನುಮತಿ ಕೋರಿದರು.
ಈ ಅರ್ಜಿಯನ್ನು ವಾಪಸ್ ಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಲಾಯಿತಾದರೂ, ಅರ್ಜಿಯಲ್ಲಿ ಗಂಭೀರ ಪ್ರಮಾಣದ ಮತ್ತು ಆಕ್ಷೇಪಯುಕ್ತ ಅಂಶಗಳು ಒಳಗೊಂಡಿದೆ ಎಂಬುದನ್ನು ವಕೀಲರಿಗೆ ತಿಳಿಸಿತು. ಇದೇ ವೇಳೆ, ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿಯುವ ಕುರಿತು ಮಾರ್ಗಸೂಚಿಯನ್ನು ರೂಪಿಸುವುದು ಸೂಕ್ತವೇ ಎಂಬ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ