22/12/2024

Law Guide Kannada

Online Guide

ಅಧಿಕಾರ ದುರುಪಯೋಗ: ಸರ್ಕಾರಿ ಅಧಿಕಾರಿಗೆ CrPC ಸೆಕ್ಷನ್ 197ರಡಿ ರಕ್ಷಣೆ ಒದಗಿಸಲು ಸಾಧ್ಯವಿಲ್ಲ – ಸುಪ್ರೀಂಕೋರ್ಟ್

ನವದೆಹಲಿ: ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಸರಕಾರದ ಅಧಿಕಾರಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರೇ ಅಂತಹ ಅಧಿಕಾರಿಗಳಿಗೆ ಸಿಆರ್ ಪಿಸಿ ಸೆಕ್ಷನ್ 197ರ ಅಡಿಯಲ್ಲಿ ರಕ್ಷಣೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

“ಓಂ ಪ್ರಕಾಶ್ ಯಾದವ್ ಗಿs ನಿರಂಜನ ಕುಮಾರ್ ಉಪಾಧ್ಯಾಯ” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ. ಸುಳ್ಳು ಪ್ರಕರಣ ದಾಖಲಿಸುವ ಪೊಲೀಸ್ ಅಧಿಕಾರಿಗಳು ತಾನು ಅಧಿಕೃತ ಕರ್ತವ್ಯದಲ್ಲಿದೆ ಎಂಬ ನೆಪ ಹೇಳಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಸರ್ಕಾರಿ ಅಧಿಕಾರಿ ಕಾನೂನಿಡಿ ರಕ್ಷಣೆ ಕೇಳುವಂತಿಲ್ಲ. ಸುಳ್ಳು ಪ್ರಕರಣ ದಾಖಲಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಯ ಅಥವಾ ದಾಖಲೆಗಳನ್ನು ಸೃಷ್ಟಿ ಮಾಡುವುದು ಸರಕಾರಿ ಅಧಿಕಾರಿಯ ಅಧಿಕೃತ ಕರ್ತವ್ಯದ ಭಾಗವಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಏನು ಹೇಳುತ್ತೆ CRPC ಸೆಕ್ಷನ್ 197…?
“ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದರೆ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುತ್ತದೆ. ಅಂತಹ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಸರಕಾರದಿಂದ ಪೂರ್ವಾನುವತಿ ಪಡೆಯಬೇಕು” ಎಂಬುದನ್ನು ಈ ಸೆಕ್ಷನ್ ಹೇಳುತ್ತದೆ.

ಖಾಲಿ ಕಾಗದದ ಮೇಲೆ ಸಹಿ ಹಾಕಲು ಒತ್ತಾಯಿಸುವುದು, ಆರೋಪಿಯನ್ನು ಅಕ್ರಮವಾಗಿ ಬಂಧಿಸಿ ಇರಿಸಿಕೊಳ್ಳುವುದು, ಸುಳ್ಳು ಇಲ್ಲವೇ ಕೃತಕ ದಾಖಲೆಗಳ ಸೃಷ್ಟಿಗಾಗಿ ಪಿತೂರಿಯಲ್ಲಿ ತೊಡಗುವುದು, ‘ನಾನು ಹೇಳಿದಂತೆ ಹೇಳಿಕೆ ನೀಡು’ ಎಂದು ಬೆದರಿಕೆ ಹಾಕುವುದು, ವ್ಯಕ್ತಿಗೆ ಕಿರುಕುಳ ನೀಡುವ ಅಥವಾ ಬೆದರಿಕೆ ಹಾಕುವ ಏಕೈಕ ಉದ್ದೇಶದಿಂದ ಶೋಧ ಕಾರ್ಯ ನಡೆಸುವುದು… ಇತ್ಯಾದಿಗಳು ಸಿಆರ್ಪಿಸಿ ಸೆಕ್ಷನ್ 197 ಅಡಿಯಲ್ಲಿ ರಕ್ಷಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಹೀಗಾಗಿ ಪೊಲೀಸ್ ಅಧಿಕಾರಿ ಸುಳ್ಳು ಪ್ರಕರಣ ದಾಖಲಿಸಿದ ಆರೋಪ ಕೇಳಿ ಬಂದಾಗ ಅವರಿಗೆ ಸಿಆರ್ಪಿಸಿ ಸೆಕ್ಷನ್ 197ರ ಅಡಿಯಲ್ಲಿ ರಕ್ಷಣೆಯನ್ನು ನೀಡಲು ಸಾಧ್ಯವಿಲ್ಲ. ಅಲ್ಲದೆ ಸುಳ್ಳು ಪ್ರಕರಣ ದಾಖಲಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷ ಅಥವಾ ದಾಖಲೆಗಳನ್ನು ಸೃಷ್ಟಿಸುವುದು ಸರಕಾರಿ ಅಧಿಕಾರಿಯ ಅಧಿಕೃತ ಕರ್ತವ್ಯದ ಭಾಗವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.