ರಾಜ್ಯ ಸರಕಾರಕ್ಕೆ ಐದುಲಕ್ಷ ರೂಪಾಯಿ ದಂಡ
ಬೆಂಗಳೂರು : ನ್ಯಾಯಾಲಯದ ಆದೇಶವನ್ನು ಪಾಲಿಸದ ರಾಜ್ಯ ಸರಕಾರವನ್ನು ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮುಖ್ಯ ನ್ಯಾಯಮೂರ್ತಿ ವಿ.ಬಿ.ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ವಿಭಾಗೀಯ ಪೀಠವು ಈ ಆದೇಶ ನೀಡಿತು.
ಇಲ್ಲಿನ ಕೋನೇನ ಅಗ್ರಹಾರದ ಪ್ರೌಢಶಾಲೆಯೊಂದರಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ನಿವೃತ್ತರಾಗಿರುವ ಗ್ರಂಥಪಾಲಕಿ ವಿ.ಎ.ನಾಗಮಣಿ ಅವರು ತಮಗೆ ಗ್ರಂಥಪಾಲಕರ ವೇತನ ಮಂಜೂರು ಮಾಡಬೇಕೆಂದು ಕೋರಿದ್ದರು.
ಹೈಕೋರ್ಟ್ ವಿಚಾರಣೆ ನಡೆಸಿ ನಾಗಮಣಿ ಅವರ ವೇತನ ತಾರತಮ್ಯ ಸರಿಪಡಿಸುವಂತೆ ಆದೇಶಿಸಿತ್ತು. ಆದರೆ, ಸರಕಾರ ಈ ಆದೇಶವನ್ನೇ ಪಾಲಿಸಲಿಲ್ಲ.
ನಾಗಮಣಿ ಅವರು ಸರಕಾರ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.
ಸರಕಾರದ ಪರ ವಕೀಲ ಎಚ್.ಎಸ್.ಮಹೇಂದ್ರ ಅವರು ವಿಚಾರಣೆ ವೇಳೆ ಹಾಜರಾಗಿ ಈ ವಿಷಯವು ಆರ್ಥಿಕ ಇಲಾಖೆ ಒಪ್ಪಿಗೆಗಾಗಿ ಕಾಯುತ್ತಿದೆ. ನ್ಯಾಯಾಲಯದ ಆದೇಶ ಪಾಲಿಸಲು ಇನ್ನು ಆರು ವಾರಗಳ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸರಕಾರದಲ್ಲಿ ಯಾವ ತಮಾಷೆ ನಡೆಯುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಜನರ ಹಕ್ಕುಗಳನ್ನು ಎತ್ತಿ ಹಿಡಿಯಲು ನ್ಯಾಯಾಲಯ ಇದೆ ಎಂದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ