23/12/2024

Law Guide Kannada

Online Guide

ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ನಿಯಮ ಪರಿಷ್ಕರಣೆಗೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ನಿಯಮಗಳ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುದಾಗಿದೆ.

ಹೌದು, ಹಲವು ಪ್ರಕರಣಗಳಲ್ಲಿ ನ್ಯಾಯಾಧೀಶರು ಸಮರ್ಪಕ ವಿಚಾರಣೆ ನಡೆಸುವುದಿಲ್ಲ ಹಾಗೂ ಮನಸ್ಸಿಗೆ ತೋಚಿದಂತೆ ಶಿಕ್ಷೆ ಪ್ರಕಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ , ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ನಿಯಮಗಳನ್ನು ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ನ್ಯಾಯಾಲಯ ವಿಧಿಸುವ ಶಿಕ್ಷೆ ಅಪರಾಧಕ್ಕೆ ತಕ್ಕಂತೆ ಇರಬೇಕು, ಇದನ್ನು ಖಾತ್ರಿಪಡಿಸಲು ಸೂಕ್ತ ವ್ಯವಸ್ಥೆಯೊಂದನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೇ, ಬ್ರಿಟನ್, ಕೆನಡಾ ಹಾಗೂ ನ್ಯೂಜಿಲೆಂಡ್ನಲ್ಲಿರುವ ನ್ಯಾಯಾಂಗ ವ್ಯವಸ್ಥೆಯನ್ನೇ ಹೋಲುವ ನ್ಯಾಯದಾನ ವ್ಯವಸ್ಥೆಯನ್ನು ಇಲ್ಲಿಯೂ ರೂಪಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಕಾನೂನು ಸಚಿವಾಲಯವು ಈ ಕುರಿತ ಯೋಜನೆಯನ್ನು ಸುಪ್ರೀಂ ಕೋರ್ಟ್ಗೆ ಡಿಸೆಂಬರ್ ವೇಳೆಗೆ ಸಲ್ಲಿಸಲಿದೆ ಎನ್ನಲಾಗಿದೆ. ಬಿಹಾರದ ನ್ಯಾಯಾಲಯವೊಂದು2022ರಲ್ಲಿ, ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿ 30 ನಿಮಿಷದಲ್ಲಿಯೇ ವಿಚಾರಣೆ ಪೂರ್ಣಗೊಳಿಸಿ ವ್ಯಕ್ತಿಗೆ ಮರಣ ದಂಡನೆ ವಿಧಿಸಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಬಳಿಕ ಈ ತೀರ್ಪು ರದ್ದುಗೊಳಿಸಿದ್ದ ಬಿಹಾರ ಹೈಕೋರ್ಟ್, ಪ್ರಕರಣ ಕುರಿತು ಮರು ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ‘ವ್ಯಕ್ತಿಗೆ ತನ್ನ ಪರ ವಾದ ಮಂಡನೆಗೆ ಅವಕಾಶವನ್ನೇ ನೀಡಿಲ್ಲ. ಅಲ್ಲದೇ, ಈ ವಿಷಯದಲ್ಲಿ ನ್ಯಾಯಾಧೀಶರು ಬಹಳ ಅವಸರದಿಂದ ನಿರ್ಣಯ ಪ್ರಕಟಿಸಿದ್ದಾರೆ’ ಎಂದೂ ಹೈಕೋರ್ಟ್ ತಿಳಿಸಿತ್ತು.

ಈ ಘಟನೆ ನಂತರ, ಶಿಕ್ಷೆ ಪ್ರಕಟಿಸುವ ನಿಯಮಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಗ್ರ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ನಿಯಮ ಪರಿಷ್ಕರಣೆಗೆ ಮುಂದಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.