‘ನಗ್ನ ಚಿತ್ರಗಳೆಲ್ಲಾ ಅಶ್ಲೀಲವಲ್ಲ’: ಕಸ್ಟಮ್ಸ್ ಅಧಿಕಾರಿಗಳ ನಡೆಗೆ ಹೈಕೋರ್ಟ್ ಗರಂ: ಕಲಾಕೃತಿಗಳ ಬಿಡುಗಡೆಗೆ ಆದೇಶ
ಬಾಂಬೆ: ಕಲಾಕೃತಿಗಳು ಅಶ್ಲೀಲ ವಸ್ತುಗಳು ಎಂದು ಘೋಷಿಸಿ ಅವುಗಳನ್ನು ಜಪ್ತಿ ಮಾಡಿದ್ದ ಕಸ್ಟಮ್ಸ್ ಅಧಿಕಾರಿಗಳ ನಡೆಗೆ ಗರಂ ಆದ ಹೈಕೋರ್ಟ್ , ನಗ್ನ ಚಿತ್ರಗಳೆಲ್ಲಾ ಅಶ್ಲೀಲವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಜಪ್ತಿ ಮಾಡಿರುವ ಕಲಾಕೃತಿಗಳನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಅಶ್ಲೀಲ ಎಂಬ ಕಾರಣಕ್ಕೆ ವಶಪಡಿಸಿಕೊಂಡಿರುವ ದೇಶದ ಚಿತ್ರಕಲಾ ಲೋಕದ ದಂತಕತೆಗಳಾದ ಫ್ರಾನ್ಸಿಸ್ ನ್ಯೂಟನ್ ಸೋಜಾ (ಎಫ್ ಎನ್ ಸೋಜಾ) ಹಾಗೂ ಅಕ್ಬರ್ ಪದಮ್ ಸೀ ಅವರ ಏಳು ಕಲಾಕೃತಿಗಳನ್ನು ಬಿಡುಗಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಜಿತೇಂದ್ರ ಜೈನ್ ಅವರಿದ್ದ ಪೀಠ ಸೂಚನೆ ನೀಡಿದೆ.
ಅಶ್ಲೀಲತೆ ಕುರಿತು ತೀರ್ಮಾನ ಕೈಗೊಳ್ಳಲು ಸೂಕ್ತ ಸಮರ್ಥನೆಯಿಲ್ಲದೆ ಕಸ್ಟಮ್ಸ್ ಅಧಿಕಾರಿಗಳು ಸಾಮುದಾಯಿಕ ಮಾನದಂಡಗಳನ್ನು ಮನಬಂದಂತೆ ಪ್ರತಿನಿಧಿಸಲಾಗದು ಎಂದ ನ್ಯಾಯಪೀಠವು, ಕಲಾಕೃತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ವಿಮಾನ ನಿಲ್ದಾಣದ ವಿಶೇಷ ಕಾರ್ಗೋ ಕಮಿಷನರೇಟ್ ನ ಕಸ್ಟಮ್ಸ್ ಸಹಾಯಕ ಆಯುಕ್ತರು ಕಳೆದ ಜುಲೈ 1ರಂದು ನೀಡಿದ್ದ ಆದೇಶವನ್ನು ರದ್ದು ಮಾಡಿತು
ಪ್ರಕರಣದ ಹಿನ್ನೆಲೆ ಏನು…?
ಲಂಡನ್ನಲ್ಲಿ ನಡೆದ ಹರಾಜಿನ ಮೂಲಕ ಅಕ್ಬರ್ ಪದಮ್ಸೀ ಅವರ ಮೂರು ಮತ್ತು ಎಫ್ ಎನ್ ಸೋಜಾ ಅವರ ನಾಲ್ಕು ರೇಖಾಚಿತ್ರಗಳನ್ನು 2022ರಲ್ಲಿ ಬಿಕೆ ಪಾಲಿಮೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಅರ್ಜಿದಾರ) ಎಂಬ ಕಂಪನಿ ಖರೀದಿಸಿತ್ತು. ಕಸ್ಟಮ್ಸ್ ನಿಯಮಗಳಿಗೆ ಅನುಸಾರವಾಗಿ ಕಂಪೆನಿ “ನಗ್ನ ರೇಖಾಚಿತ್ರಗಳು” ಎಂದು ಸ್ಪಷ್ಟವಾಗಿ ಶೀರ್ಷಿಕೆ ನೀಡಿ ಫೆಡೆಕ್ಸ್ ಕೊರಿಯರ್ ಸಂಸ್ಥೆ ಮೂಲಕ ಆ ಕಲಾಕೃತಿಗಳನ್ನು ಭಾರತಕ್ಕೆ ಕಳಿಸಿಕೊಟ್ಟಿತ್ತು.
ಕೊರಿಯರ್ ಮೂಲಕ ಬಂದ ಕಲಾಕೃತಿಗಳನ್ನು ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳು ಚಿತ್ರಗಳನ್ನು ಮುಟ್ಟುಗೋಲು ಹಾಕಿಕೊಂಡು ನಾಶಪಡಿಸುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಆ ಕಲಾಕೃತಿಗಳನ್ನು ಮತ್ತೆ ಹಿಂದಕ್ಕೆ ಪಡೆದರೆ ಅವುಗಳನ್ನು ಅಶ್ಲೀಲ ಎಂದು ಕರೆಯುವುದು ತಪ್ಪುತ್ತದೆ ಎಂದು ಭಾವಿಸಿದ ಕಂಪನಿ ಅವುಗಳನ್ನು ಹಿಂಪಡೆಯಲು ಮುಂದಾಯಿತು.
ಆದರೆ ಅವುಗಳನ್ನು ಅಶ್ಲೀಲ ವಸ್ತುಗಳು ಎಂದು ಘೋಷಿಸಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಪತ್ರ ನೀಡಿದರು. ಇದನ್ನು ಪ್ರಶ್ನಿಸಿದರೂ ಜಪ್ತಿ ಮಾಡಿರುವುದನ್ನು ಎತ್ತಿ ಹಿಡಿದ ಕಸ್ಟಮ್ಸ್ ಸಹಾಯಕ ಆಯುಕ್ತರು Rs 50,000 ದಂಡ ವಿಧಿಸಿ ಆದೇಶಿಸಿದ್ದರು. ನಂತರ ಅರ್ಜಿದಾರ ಕಂಪನಿ ಹೈಕೋರ್ಟ್ ಮೊರೆ ಹೋಯಿತು.
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಕಸ್ಟಮ್ಸ್ ಅಧಿಕಾರಿಗಳು ಅಶ್ಲೀಲತೆಯ ವೈಯಕ್ತಿಕ ವ್ಯಾಖ್ಯಾನಗಳನ್ನು ಅವಲಂಬಿಸಿದ್ದಾರೆ ಮತ್ತು ತಜ್ಞರ ಅಭಿಪ್ರಾಯಗಳು ಮತ್ತು ಸಂಬಂಧಿತ ಕಾನೂನು ಮಾನದಂಡಗಳನ್ನು ನಿರ್ಲಕ್ಷಿಸಿದ್ದಾರೆ. ಅಲ್ಲದೆ ಭಾರತೀಯ ಕಾನೂನು “ಅಶ್ಲೀಲತೆ”ಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದಿಲ್ಲ ಎಂದ ನ್ಯಾಯಾಲಯ ಅಧಿಕಾರಿಯ ತೀರ್ಮಾನಗಳು ವಿಕೃತ ಮತ್ತು ಅಸಮಂಜಸವೆಂದು ಅಭಿಪ್ರಾಯಪಟ್ಟಿತು.
“ನಗ್ನತೆ ಇಲ್ಲವೇ ಲೈಂಗಿಕ ಸಂಭೋಗವನ್ನು ಚಿತ್ರಿಸುವ ಪ್ರತಿಯೊಂದು ವರ್ಣಚಿತ್ರವೂ ಅಶ್ಲೀಲವಲ್ಲ. ನಮ್ಮ ಕಸ್ಟಮ್ಸ್ ಗಡಿ ದಾಟುವ ಮೊದಲು ವಿಶ್ವ ವಿಖ್ಯಾತ ಚಿತ್ರ ಕಲಾವಿದ ಮೈಕೆಲ್ಯಾಂಜೆಲೊನ ʼಡೇವಿಡ್ʼ ಪೂರ್ಣ ಬಟ್ಟೆ ಧರಿಸಬೇಕು ಎಂದು ದೇಶದ ಕಸ್ಟಮ್ಸ್ ಕಾನೂನು ಒತ್ತಾಯಿಸುವುದಿಲ್ಲ. ಕಸ್ಟಮ್ಸ್ ಸಹಾಯಕ ಆಯುಕ್ತರು ಲಘವಾಗಿ ಹಾಗೂ ಸಂಬಂಧಿತ ಪರಿಗಣನೆಗಳನ್ನು ಲಕ್ಷಿಸದೆಯೇ ಸಾಮುದಾಯಿಕ ಮಾನದಂಡಗಳ ವಕ್ತಾರರಾಗಿರುವಂತೆ ತೋರುತ್ತಿದೆ. ಕೋಳಿಯನ್ನು ಕೇಳಿ ಹೇಗೆ ಬೆಳಕು ಹರಿಯುವುದಿಲ್ಲವೋ ಹಾಗೆ ಕಸ್ಟಮ್ಸ್ ಸಹಾಯಕ ಆಯುಕ್ತರ ಒಂದು ನಿರ್ಧಾರ ಈ ವಿಚಾರವಾಗಿ ಕಾನೂನು ರೂಪಿಸುವುದಿಲ್ಲ” ಎಂದು ಅದು ಕಿವಿ ಹಿಂಡಿದೆ.
ಬಾಂಬೆ ಹೈಕೋರ್ಟ್ನಮ್ಮ ಕಸ್ಟಮ್ಸ್ ಗಡಿ ದಾಟುವ ಮೊದಲು ವಿಶ್ವ ವಿಖ್ಯಾತ ಚಿತ್ರ ಕಲಾವಿದ ಮೈಕೆಲ್ಯಾಂಜೆಲೊನ ʼಡೇವಿಡ್ʼ ಪೂರ್ಣ ಬಟ್ಟೆ ಧರಿಸಬೇಕು ಎಂದು ದೇಶದ ಕಸ್ಟಮ್ಸ್ ಕಾನೂನು ಒತ್ತಾಯಿಸುವುದಿಲ್ಲ. ಪದಮ್ಸೀ ಅವರು ಪದ್ಮಭೂಷಣ ಮತ್ತು ಸೌಜಾ ಅವರ ಗುಗೆನ್ಹೈಮ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದನ್ನು ಗಣನಗೆಗೆ ತೆಗೆದುಕೊಂಡ ನ್ಯಾಯಾಲಯ ಈ ಗೌರವಗಳು ಕಲಾ ಜಗತ್ತಿಗೆ ಅವರ ಮಹತ್ವದ ಕೊಡುಗೆಗಳನ್ನು ಹೇಳುತ್ತಿದ್ದು ಇದನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಿಳಿಸಿತು.
ಅಲ್ಲದೆ ಕಸ್ಟಮ್ಸ್ ಆದೇಶ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ ಎರಡು ವಾರಗಳಲ್ಲಿ ಮುಟ್ಟುಗೋಲು ಹಾಕಿಕೊಂಡ ಕಲಾಕೃತಿಗಳನ್ನು ಮರಳಿಸುವಂತೆ ಸೂಚನೆ ನೀಡಿತು ಬಿಕೆ ಪಾಲಿಮೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪರವಾಗಿ ವಕೀಲರಾದ ಶ್ರೇಯಸ್ ಶ್ರೀವಾಸ್ತವ, ವಕೀಲರಾದ ಸೌರಭ್ ಶ್ರೀವಾಸ್ತವ್ ಮತ್ತು ಶ್ರದ್ಧಾ ಸ್ವರೂಪ್ ಅವರು ವಾದ ಮಂಡಿಸಿದರು. ಕೇಂದ್ರ ಸರ್ಕಾರ ಮತ್ತು ಕಸ್ಟಮ್ಸ್ ಅಧಿಕಾರಿಗಳ ಪರ ವಕೀಲರಾದ ಅಭಿಷೇಕ್ ಮಿಶ್ರಾ ಮತ್ತು ರೂಪೇಶ್ ದುಬೆ ಅವರೊಂದಿಗೆ ವಕೀಲ ಜಿತೇಂದ್ರ ಬಿ ಮಿಶ್ರಾ ವಾದಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ