23/12/2024

Law Guide Kannada

Online Guide

ತಮ್ಮ ಸಹೋದ್ಯೋಗಿ ಸೇವಾ ವಿವರ ಪಡೆದುಕೊಳ್ಳಲು ನೌಕರರಿಗೆ ಹಕ್ಕಿದೆಯೇ…?

ಬೆಂಗಳೂರು: ಕಾನೂನು ವಿವಾದಗಳ ಉದ್ದೇಶಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ನೌಕರರು ತಮ್ಮ ಸಹೋದ್ಯೋಗಿಯ ಸೇವಾ ವಿವರಗಳನ್ನು ಪಡೆದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

“ಎ.ಎಸ್.ಮಲ್ಲಿಕಾರ್ಜುನ ಸ್ವಾಮಿ ಗಿS ರಾಜ್ಯ ಮಾಹಿತಿ ಆಯೋಗ ಮತ್ತಿತರರು” ಪ್ರಕರಣದಲ್ಲಿ ಈ ತೀರ್ಪು ಪ್ರಕಟಿಸಿರುವ ಕ ಹೈಕೋರ್ಟ್ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ನೌಕರರು ತಮ್ಮ ಸಹದ್ಯೋಗಿಯ ಉದ್ಯೋಗ ಅಥವಾ ಸೇವಾ ವೃತ್ತಿ ಬಗ್ಗೆ ಅಗತ್ಯವಿರುವ ಮಾಹಿತಿಯನ್ನು ಕೋರುವುದು ತಪ್ಪೇನಲ್ಲ. ಹಾಗಾಗಿ, ಸಹೋದ್ಯೋಗಿಯ ಸೇವಾ ವಿವರ ಮಾಹಿತಿ ಹಕ್ಕಿನಡಿ ಪಡೆದುಕೊಳ್ಳಲು ನೌಕರರಿಗೆ ಹಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ
ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅರ್ಜಿದಾರರಾದ ಮಲ್ಲಿಕಾರ್ಜುನ ಸ್ವಾಮಿ ತಮ್ಮ ಸಹೋದ್ಯೋಗಿಯ ಸೇವಾ ವಿವರಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ವೈಯಕ್ತಿಕ ವಿವರಗಳನ್ನು ಸಾರ್ವಜನಿಕರಿಗೆ ಅಥವಾ ಹಿತಾಸಕ್ತಿ ಇಲ್ಲದ ವ್ಯಕ್ತಿಗಳಿಗೆ ನೀಡಲು ನಿರ್ಬಂಧ ಇರುವ ನಿಯಮ ಸೆಕ್ಷನ್ 8(1)(ರಿ)ಯನ್ನು ಉಲ್ಲೇಖಿಸಿ ಮಾಹಿತಿಯನ್ನು ಒದಗಿಸಲು ನಿರಾಕರಿಸಲಾಗಿತ್ತು. ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಜ್ಯ ಮಾಹಿತಿ ಆಯೋಗ ಪುರಸ್ಕರಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರಾದ ಮಲ್ಲಿಕಾರ್ಜುನ ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರು ಮಾಹಿತಿ ಕೋರಿದ ಸಂಸ್ಥೆಗೆ ಅಪರಿಚಿತರೇನಲ್ಲ. ಹಲವು ವರ್ಷಗಳಿಂದ ಅರ್ಜಿದಾರರು ಅದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಿತು.

ತನ್ನ ಜೇಷ್ಟತೆ, ಪದೋನ್ನತಿ ಮತ್ತು ಇತರ ವಿಷಯಗಳಿಗಾಗಿ, ಅರ್ಜಿದಾರರು ತಮ್ಮ ಸಹೋದ್ಯೋಗಿಯ ಸೇವಾ ದಾಖಲೆಯನ್ನು ಕೋರಿದ್ದಾರೆ. ತಮ್ಮ ಉದ್ಯೋಗ ಅಥವಾ ಸೇವಾ ವೃತ್ತಿ ಬಗ್ಗೆ ಅಗತ್ಯವಿರುವ ಮಾಹಿತಿಯನ್ನು ಕೋರುವುದು ತಪ್ಪೇನಲ್ಲ. ಹಾಗಾಗಿ, ಸಹೋದ್ಯೋಗಿಯ ಸೇವಾ ವಿವರ ಮಾಹಿತಿ ಹಕ್ಕಿನಡಿ ಪಡೆದುಕೊಳ್ಳಲು ನೌಕರರಿಗೆ ಹಕ್ಕಿದೆ ಎಂದು ತಿಳಿಸಿದೆ.

ಹಾಗೆಯೇ ಆದೇಶ ಹೊರಡಿಸಿದ ಮೂರು ವಾರದಲ್ಲಿ ಅರ್ಜಿದಾರರು ಕೋರಿರುವ ಮಾಹಿತಿಯನ್ನು ಒದಗಿಸಬೇಕು. ಮಾಹಿತಿ ನೀಡುವಲ್ಲಿ ವಿಳಂಬವಾದರೇ, ಪ್ರತಿ ದಿನಕ್ಕೆ ರೂ. 1000/-ದಂತೆ ದಂಡವನ್ನು ತನ್ನ ಜೇಬಿನಿಂದ ನೀಡುವಂತೆ ನ್ಯಾಯಪೀಠ ತಿಳಿಸಿದೆ. ಜೊತೆಗೆ ಐದನೇ ಪ್ರತಿವಾದಿಯು ರೂ. 5000/- ಖರ್ಚು ನೀಡುವಂತೆ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.