ನ್ಯಾಯಾಧೀಶರ ಜೊತೆ ವಾಗ್ವಾದ, ಅನುಚಿತ ವರ್ತನೆ: ವಕೀಲರ ಮೇಲೆ ಪೊಲೀಸರಿಂದ ಲಾಠಿಚಾರ್ಜ್
ಗಾಜಿಯಾಬಾದ್: ನ್ಯಾಯಾಧೀಶರ ಜೊತೆ ವಾಗ್ವಾದಕ್ಕಿಳಿದು ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ವಕೀಲರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆ ಗಾಜಿಯಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ.
ನಿರೀಕ್ಷಣಾ ಜಾಮೀನು ಪ್ರಕರಣಗಳನ್ನು ಆದ್ಯತೆ ಮೇಲೆ ವಿಚಾರಣೆ ನಡೆಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜಡ್ಜ್ ಜೊತೆಗೆ ವಕೀಲರು ವಾಗ್ವಾದ ನಡೆಸಿ ಅನುಚಿತ ವರ್ತನೆ ತೋರಿದ್ದು, ಇದರಿಂದ ಕೋಪಗೊಂಡ ನ್ಯಾಯಾಧೀಶರು ಪೊಲೀಸರನ್ನು ಕರೆಸಿದರು. ಆಕ್ರೋಶಿತ ವಕೀಲರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.
ಪೊಲೀಸರು ಲಾಠಿ ಪ್ರಹಾರ ಮಾಡಿದ ಹಿನ್ನೆಲೆ ಆಕ್ರೋಶಗೊಂಡ ವಕೀಲರು ಕೋರ್ಟ್ ಆವರಣದ ಬಳಿಯೇ ಇದ್ದ ಪೊಲೀಸ್ ಔಟ್ ಪೋಸ್ಟ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆಗಿದ್ದೇನು..?
ಜಿಲ್ಲಾ ನ್ಯಾಯಾಧೀಶರಾದ ಅನಿಲ್ ಕುಮಾರ್ ಬಳಿ ನಹರ್ ಸಿಂಗ್ ಯಾದವ್ ನೇತೃತ್ವದ ವಕೀಲರ ತಂಡವು ನಿರೀಕ್ಷಣಾ ಜಾಮೀನು ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. ಒಂದು ವೇಳೆ, ಇದು ಸಾಧ್ಯವಾಗದೇ ಇದ್ದರೆ, ಅದನ್ನು ಬೇರೆ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದರು.
ಆದರೆ ತಕ್ಷಣ ವಿಚಾರಣೆಗೆ ನಿರಾಕರಿಸಿದ ನ್ಯಾಯಾಧೀಶರು, ಪಟ್ಟಿ ಮಾಡಿದ ಕ್ರಮದಲ್ಲಿಯೇ ಅರ್ಜಿಗಳನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಇದು ವಕೀಲರು ಮತ್ತು ನ್ಯಾಯಾಧೀಶರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದ್ದು, ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದಾಗ ನ್ಯಾಯಾಧೀಶರು ಪೊಲೀಸರನ್ನ ಕರೆಸಿದ್ದಾರೆ. ಈ ವೇಳೆ ಕೋರ್ಟ್ ಆವರಣ ಪ್ರವೇಶಿಸಿದ ಪೊಲೀಸರು ವಾಗ್ವಾದ ನಡೆಸುತ್ತಿದ್ದ ವಕೀಲರನ್ನು ಚದುರಿಸಲು ಲಾಠಿಚಾರ್ಜ್ ಮಾಡಿದ್ದಾರೆ. ಒಂದು ಹಂತದಲ್ಲಿ ಪೊಲೀಸರು ವಕೀಲರ ಮೇಲೆ ನೇರವಾಗಿ ಹಲ್ಲೆ ನಡೆಸಿದರು ಎಂಬ ಆರೋಪವೂ ಕೇಳಿ ಬಂದಿದೆ.
ಪೊಲೀಸರ ನಡೆ ಖಂಡಿಸಿ ವಕೀಲರ ಪ್ರತಿಭಟನೆ
ಇನ್ನು ಪೊಲೀಸರು ಲಾಠಿಚಾರ್ಜ್ ನಡೆಸಿ ಅಮಾನುಷವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ವಕೀಲರು ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದರೆ, ವಿವಾದಿತ ಜಿಲ್ಲಾ ನ್ಯಾಯಾಧೀಶರ ಕಲಾಪವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ