ಕೆಲಸದ ಹೊರೆ: ರಜಾ ಅವಧಿಯಲ್ಲಿ ನ್ಯಾಯಾಧೀಶರು ಮೋಜು ಮಸ್ತಿ ಮಾಡಲ್ಲ – ಸಿಜೆಐ ಡಿವೈ ಚಂದ್ರಚೂಡ್ ನುಡಿ
ಮುಂಬೈ: ನ್ಯಾಯಾಧೀಶರು ರಜಾ ಅವಧಿಯಲ್ಲಿ ಮೋಜು ಮಾಡಲ್ಲ. ನ್ಯಾಯಾಧೀಶರಿಗೆ ಅಲೋಚಿಸಲು, ಕಾನೂನಿನ ಕುರಿತು ಅಧ್ಯಯನ ಮಾಡಲು ಸಾಕಷ್ಟು ಸಮಯ ಸಿಗುವುದಿಲ್ಲ ಎಂದು ಹೇಳುವ ಮೂಲಕ ನ್ಯಾಯಾಧೀಶರ ಮೇಲಿರುವ ಕೆಲಸದ ಹೊರೆಯ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿವೈ ಚಂದ್ರಚೂಡ್ ವಿವರಿಸಿದರು.
ಮುಂಬಯಿಯಲ್ಲಿ ಲೋಕಸತ್ತಾ ವಾರ್ಷಿಕ ಉಪನ್ಯಾಸದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ರಜಾ ಅವಧಿಗಳಲ್ಲಿಯೂ ನ್ಯಾಯಾಧೀಶರು ಮೋಜು ಮಾಡುವ ಸಲುವಾಗಿ ಅಡ್ಡಾಡುವುದಿಲ್ಲ. ಅವರು ತಮ್ಮ ಕೆಲಸಗಳಿಗೆ ಬಹಳ ಬದ್ಧರಾಗಿರುತ್ತಾರೆ. ನ್ಯಾಯಾಧೀಶರಿಗೆ ಅಲೋಚಿಸಲು ಅಥವಾ ಕಾನೂನಿನ ಕುರಿತು ಅಧ್ಯಯನ ಮಾಡಲು ಸಾಕಷ್ಟು ಸಮಯ ಸಿಗುವುದಿಲ್ಲ. ಆದರೆ ಯಂತ್ರಗಳ ರೀತಿ ಅವರು ಪ್ರಕರಣಗಳನ್ನು ಇತ್ಯರ್ಥ ಮಾಡಲಿ ಎಂದು ನಿರೀಕ್ಷಿಸಲಾಗುತ್ತಿದೆ. ನ್ಯಾಯಾಧೀಶರು ನ್ಯಾಯಾಂಗದಲ್ಲಿ ಮುಂದೆ ಬೆಳೆದಷ್ಟೂ ಅವರ ಕೆಲಸದ ಹೊರೆಯ ಪ್ರಮಾಣ ಹಾಗೂ ಜಟಿಲತೆ ಹೆಚ್ಚುತ್ತಾ ಹೋಗುತ್ತದೆ. ಇದು ಬೇರೆ ಕ್ಷೇತ್ರಗಳಲ್ಲಿ ಇರುವುದಿಲ್ಲ ಎಂದು ಹೇಳಿದರು.
ಸಭೆಗಳು ನಡೆದ ಮಾತ್ರಕ್ಕೆ ಒಪ್ಪಂದ ನಡೆದಿದೆ ಎಂದರ್ಥವಲ್ಲ
ಇತ್ತೀಚೆಗೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿವೈ ಚಂದ್ರಚೂಡ್ ಅವರ ನಿವಾಸಕ್ಕೆ ತೆರಳಿ ಪೂಜೆ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಸಿಜೆಐ ಚಂದ್ರಚೂಡ್, ಸರ್ಕಾರದ ಮುಖ್ಯಸ್ಥರು ಮತ್ತು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಡುವಿನ ಸಭೆಗಳು ನಡೆದ ಮಾತ್ರಕ್ಕೆ ಅವರ ನಡುವೆ ಒಪ್ಪಂದ ನಡೆದಿದೆ ಎಂದರ್ಥವಲ್ಲ. ಸರ್ಕಾರದ ಮುಖ್ಯಸ್ಥರು ಮತ್ತು ನ್ಯಾಯಮೂರ್ತಿಗಳ ನಡುವಿನ ಮಾತುಕತೆಗಳು ಯಾವಾಗಲೂ ‘ರಾಜಕೀಯ ಪ್ರಬುದ್ಧತೆ’ ಹೊಂದಿರುತ್ತವೆ. ಈ ವೇಳೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಮಾತುಕತೆ ನಡೆಯುವುದಿಲ್ಲ ಎಂದಿದ್ದಾರೆ.
“ನಾವು ಭೇಟಿಯಾದ ಮಾತ್ರಕ್ಕೆ ಒಪ್ಪಂದ ನಡೆದಿದೆ ಎಂದಲ್ಲ. ನಾವು ರಾಜ್ಯಗಳ ಸಿಎಂಗಳ ಜತೆ ಮಾತುಕತೆ ನಡೆಸಬೇಕಾಗುತ್ತದೆ. ಏಕೆಂದರೆ ನ್ಯಾಯಾಂಗಕ್ಕೆ ಅವರು ಬಜೆಟ್ ಒದಗಿಸಬೇಕಿರುತ್ತದೆ. ಈ ಬಜೆಟ್ಗಳು ನ್ಯಾಯಾಧೀಶರಿಗೆ ಅಲ್ಲ. ನಾವು ಅವರನ್ನು ಖುದ್ದು ಭೇಟಿಯಾಗದೆ ಇದ್ದರೆ ಹಾಗೂ ಪತ್ರಗಳ ಮೇಲಷ್ಟೇ ಅವಲಂಬಿತವಾಗಿದ್ದರೆ ನಮ್ಮ ಕೆಲಸ ನಡೆಯುವುದಿಲ್ಲ ಎಂದು ಚಂದ್ರಚೂಡ್ ಅವರು ಸ್ಪಷ್ಟಪಡಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ