23/12/2024

Law Guide Kannada

Online Guide

ಕೋರ್ಟ್‌ ಕಲಾಪದಲ್ಲಿ ನ್ಯಾಯಾಧೀಶರ ಅನುಚಿತ ವರ್ತನೆ: ಮಾನಸಿಕ ಅರೋಗ್ಯ ಪರೀಕ್ಷೆ ನಡೆಸಲು ಸಿಜೆಐಗೆ ಮನವಿ ಮಾಡಿದ ಬಿಸಿಐ

ನವದೆಹಲಿ: ಕೋರ್ಟ್ ಕಲಾಪದ ಸಂದರ್ಭದಲ್ಲಿ ನ್ಯಾಯಾಧೀಶರ ಅನುಚಿತ ವರ್ತನೆ ಸಂಬಂಧ ಮಾನಸಿಕ ಅರೋಗ್ಯ ಪರೀಕ್ಷೆ ನಡೆಸಲು ಸುಪ್ರೀಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಭಾರತೀಯ ವಕೀಲರ ಪರಿಷತ್ ಮನವಿ ಮಾಡಿದೆ.

ಮದರಾಸು ಹೈಕೋರ್ಟ್ ನ್ಯಾಯಮೂರ್ತಿ ಆ‌ರ್. ಸುಬ್ರಮಣಿಯನ್ ಅವರು ಹಿರಿಯ ವಕೀಲರ ವಿಲ್ಸನ್ ಅವರ ವಿರುದ್ಧ ವಿಚಾರಣೆ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಜೆಐ ಅವರಿಗೆ ಬಿಸಿಐ ಈ ಪತ್ರ ಬರೆದಿದೆ.

ಪ್ರಕರಣವೊಂದರಲ್ಲಿ ಸಂಭಾವ್ಯ ಹಿತಾಸಕ್ತಿ ಸಂಘರ್ಷವೊಂದನ್ನು ವಿಶೇಷವಾಗಿ ಗಮನಹರಿಸಲು ವಿಲ್ಸನ್ ಮುಂದಾದಾಗ ನ್ಯಾ. ಸುಬ್ರಮಣಿಯನ್ ಅನುಚಿತ ಭಾಷೆ ಬಳಸಿ ಕಟುವಾಗಿ ಟೀಕೆ ಮಾಡುವ ಪ್ರತಿಕ್ರಿಯೆ ನೀಡಿದ್ದರು. ನ್ಯಾಯಾಲಯದಲ್ಲಿ ಹಾಜರಿದ್ದ ಇನ್ನೊಬ್ಬ ವಕೀಲರ ವಿರುದ್ಧವೂ ಅವರು ರೇಗಾಡಿದ್ದರು.
ಈ ಸಂಬಂಧ ನ್ಯಾಯಾಧೀಶರು ವಕೀಲರನ್ನು ಟಾರ್ಗೆಟ್ ಮಾಡುವುದು ನಡೆಯುತ್ತದೆ. ಈ ಬಗ್ಗೆ ನ್ಯಾಯಾಧೀಶರ ಅನುಚಿತ ವರ್ತನೆಯನ್ನು ತಡೆಯುವ ಜೊತೆಗೆ ಅವರಿಗೆ ಮಾನಸಿಕ ತರಬೇತಿ ಮತ್ತು ಪುನಶ್ಚತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ.ವೈ. ಚಂದ್ರಚೂಡ್ ಅವರಿಗೆ ಭಾರತೀಯ ವಕೀಲರ ಪರಿಷತ್‌ ಮನವಿ ಮಾಡಿದೆ.

ನ್ಯಾಯಾಲಯದಲ್ಲಿ ನಿರ್ದಿಷ್ಟ ವಕೀಲರನ್ನು ಟಾರ್ಗೆಟ್ ಮಾಡುವುದು, ಅನುಚಿತವಾಗಿ ನಡೆದುಕೊಳ್ಳುವ ಘಟನೆಗಳು ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇಂತಹ ಕ್ರಮಗಳು ಸ್ವಾಗತಾರ್ಹ ಎಂದು ಬಿಸಿಐ ತನ್ನ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.

ನ್ಯಾಯಾಧೀಶರುಗಳ ಮಾನಸಿಕ ಆರೋಗ್ಯವನ್ನು ಆಗಾಗ ಪರೀಕ್ಷೆ ನಡೆಸುತ್ತಿರಬೇಕು. ಇದರಿಂದ ಅವರ ಅನುಚಿತ ವರ್ತನೆಯನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಕೋರ್ಟ್‌ ಸಿಬ್ಬಂದಿ ಜೊತೆಗೆ ನ್ಯಾಯಾಂಗದ ಅಧಿಕಾರಿ ಗೌರವಯುತವಾಗಿ ವರ್ತಿಸಬೇಕು. ವೃತ್ತಿಪರ ರೀತಿಯಲ್ಲಿ ಸಂವಹನ ನಡೆಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ನೀತಿ ಸಂಹಿತೆಯನ್ನು ರೂಪಿಸಬೇಕು ಎಂಬ ಸಲಹೆಯನ್ನು ಬಿಸಿಐ ನೀಡಿದೆ.

ಅದೇ ರೀತಿ, ನಿವೃತ್ತ ನ್ಯಾಯಾಧೀಶರ ಸಮಿತಿಯೊಂದನ್ನು ರಚಿಸಬೇಕು. ಈ ಸಮಿತಿ ಒತ್ತಡವಿಲ್ಲದೆ ಅನುಚಿತ ವರ್ತನೆ ತೋರುವ ನ್ಯಾಯಾಧೀಶರಿಗೆ ಸೂಕ್ತ ನೆರವು, ತರಬೇತಿ ಮತ್ತು ಸಮಾಲೋಚನೆ ನಡೆಸಬೇಕು ಎಂದೂ ಮನವಿ ಪತ್ರದಲ್ಲಿ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.