23/12/2024

Law Guide Kannada

Online Guide

ಕೈಯಲ್ಲಿ ಸಂವಿಧಾನ, ಕಣ್ಣಿಗಿಲ್ಲ ಕಪ್ಪುಪಟ್ಟಿ: ನ್ಯಾಯದೇವತೆಗೆ ಹೊಸರೂಪ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ನ್ಯಾಯಾಲಯವೆಂದರೆ ತಕ್ಷಣ ನೆನಪಿಗೆ ಬರುವುದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ತಕ್ಕಡಿ ಹಿಡಿದು ನಿಂತಿರುವ ನ್ಯಾಯದೇವತೆಯ ಪ್ರತಿಮೆ. ಆದರೆ, ನ್ಯಾಯದ ಸಂಕೇತ ಎನಿಸಿರುವ ಈ ಪ್ರತಿಮೆಯ ಚಿತ್ರಣವನ್ನು ಸುಪ್ರೀಂಕೋರ್ಟ್ ಈಗ ಮರು ವಿನ್ಯಾಸಗೊಳಿಸಿದೆ.

ಹೌದು, ಎಲ್ಲರಿಗೂ ನ್ಯಾಯ ಸಮಾನ… ಕಾನೂನು ಕುರುಡಲ್ಲ ಎಂಬ ಉದ್ದೇಶದೊಂದಿಗೆ ಸುಪ್ರೀಂಕೋರ್ಟ್ ನ್ಯಾಯದೇವತೆಯ ಪ್ರತಿಮೆಯನ್ನು ಮರು ವಿನ್ಯಾಸಗೊಳಿಸಿದೆ.

ನ್ಯಾಯಾಲಯ ಎಂದರೆ ತಕ್ಷಣ ನೆನಪಿಗೆ ಬರುವುದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ತಕ್ಕಡಿ ಹಿಡಿದುಕೊಂಡು ನಿಂತಿರುವ ನ್ಯಾಯದೇವತೆಯ ಪ್ರತಿಮೆ.

ಆದರೆ ಇದೀಗ ಕಣ್ಣಿಗೆ ಬಟ್ಟೆ ಕಟ್ಟದೇ ಇರುವ ಹಾಗೂ ಕೈಯಲ್ಲಿ ಕತ್ತಿಯ ಬದಲು ಸಂವಿಧಾನವನ್ನು ಹಿಡಿದಿರುವ ಹೊಸ ನ್ಯಾಯದೇವತೆಯ ಪ್ರತಿಮೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅನಾವರಣಗೊಂಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯದೇವತೆಯ ಪ್ರತಿಮೆ ನೂತನವಾಗಿ ರೂಪುಗೊಂಡಿದೆ. ಈ ಮೂಲಕ ಕಣ್ಣಿಂದ ಬಟ್ಟೆ ತೆಗೆದ ನ್ಯಾಯದೇವತೆ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ.

ನ್ಯಾಯಮೂರ್ತಿಗಳ ಅಧ್ಯಯನಕ್ಕೆ ಮೀಸಲಿರುವ ಗ್ರಂಥಾಲಯದಲ್ಲಿ ಈ ಪ್ರತಿಮೆ ಲೋಕಾರ್ಪಣೆಗೊಂಡಿದ್ದು, ನ್ಯಾಯದೇವತೆಯ ಕೈಯಲ್ಲಿದ್ದ ಕತ್ತಿಯ ಬದಲು ಸಂವಿಧಾನವನ್ನು ನೀಡಲಾಗಿದೆ. ಪ್ರತಿಮೆಯ ಕಣ್ಣಿಗೆ ಕಟ್ಟಲಾದ ಬಟ್ಟೆ ತೆಗೆಯಲಾಗಿದೆ. ತಕ್ಕಡಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಇದು ನಿಷ್ಪಕ್ಷಪಾತವನ್ನು ಪ್ರತಿಬಿಂಬಿಸುತ್ತದೆ.

ಇದು ಭಾರತೀಯ ಸಂವಿಧಾನದ ಅನುಸಾರವೇ ನ್ಯಾಯವಿತರಣೆಯಾಗಲಿದೆ. ಎಲ್ಲರಿಗೂ ಸಮಾನ ನ್ಯಾಯ ಮತ್ತು ಕಾನೂನು ಕುರುಡಲ್ಲ ಎಂಬ ಸಂದೇಶವನ್ನು ಸಾರುವುದು ನ್ಯಾಯದೇವತೆಯ ಪ್ರತಿಮೆಯ ಮರುವಿನ್ಯಾಸದ ಹಿಂದಿನ ಉದ್ದೇಶ ಎಂದು ಉನ್ನತ ಮೂಲಗಳು ಹೇಳಿವೆ.

ನ್ಯಾಯ ದೇವತೆ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿರುವುದು ದಶಕಗಳಿಂದಲೂ ಚಾಲ್ತಿಯಲ್ಲಿತ್ತು. ಈ ಸಾಂಪ್ರದಾಯಿಕ ಪ್ರಾತಿನಿಧ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈವರೆಗೂ ಕಾನೂನಿನ ಮುಂದೆ ಎಲ್ಲ ಪ್ರಜೆಗಳೂ ಸಮಾನರು. ನ್ಯಾಯದಾನದಲ್ಲಿ ಯಾರಿಗೂ ತಾರತಮ್ಯ ಇರುವುದಿಲ್ಲ ಎಂಬುದನ್ನು ಸಂಕೇತಿಸುವಂತೆ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.