23/12/2024

Law Guide Kannada

Online Guide

ನ್ಯಾಯಾಲಯದ ವೆಬ್ ಸೈಟ್ ನಲ್ಲಿ ತದ್ವಿರುದ್ಧ ತೀರ್ಪು: ತನಿಖೆ ನಡೆಸಲು ಆದೇಶಿಸಿದ ಹೈಕೋರ್ಟ್

ಬೆಂಗಳೂರು: ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಎರಡು ತದ್ವಿರುದ್ಧ ತೀರ್ಪುಗಳು ಪ್ರಕಟವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಈ ಸಂಬಂಧ ತನಿಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಈ ತದ್ವಿರುದ್ಧ ತೀರ್ಪು ಪ್ರಕಟವಾಗಿದೆ. ಕೋರ್ಟ್ ವೆಬ್ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿರುವ ಒಂದು ಆದೇಶದಲ್ಲಿ ನ್ಯಾಯಾಧೀಶರ ಸಹಿ ಇದೆ. ಮತ್ತೊಂದರಲ್ಲಿ ಸಹಿ ಇರಲಿಲ್ಲ.

ಈ ಬಗ್ಗೆ ಪರೂಲ್ ಅಗರ್ವಾಲ್ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾ. ಸೌರಭ್ ಶ್ಯಾಮ್ ಸಂಶೇರಿ ಅವರಿದ್ದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ಅವರ ನಡತೆಗೆ ಸಂಬಂಧಿಸಿದಂತೆ ಅವರು ಹೆಚ್ಚು ಜಾಗರೂಕರಾಗಿರಲಿಲ್ಲ ಎನ್ನುವುದನ್ನು ಗಮನಿಸಿತು.. ಹಾಗೆಯೇ ತದ್ವಿರುದ್ದ ಆದೇಶ ಅಪ್ ಲೋಡ್ ಮಾಡಲಾಗಿದ್ದರೂ ಸಂಬಂಧಪಟ್ಟ ಸಿಬ್ಬಂದಿ ವಿರುದ್ದ ಇದುವರೆಗೆ ಯಾವುದೇ ತನಿಖೆ ನಡೆಸಿಲ್ಲ. ಇವರು ಯಾವ ಮ್ಯಾಜಿಸ್ಟ್ರೇಟ್ ಎಂದು ಹೈಕೋರ್ಟ್ ಗೆ ಮಾಹಿತಿ ಇದೆ. ಅವರ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ವ್ಯತಿರಿಕ್ತ ಆದೇಶವನ್ನು ನಾನು ನೀಡುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ತಿಳಿಸಿದೆ.

ಈ ಮಧ್ಯೆ ಸಹಿ ಮಾಡದ ಆದೇಶದ ಪ್ರತಿಯಲ್ಲಿ ಮಾನಹಾನಿ ದೂರನ್ನು ರದ್ದು ಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಸಹಿ ಮಾಡಿದ ಆದೇಶದಲ್ಲಿ ಪ್ರತಿವಾದಿಗಳಿಗೆ ಐಪಿಸಿ ಸೆಕ್ಷನ್ 500ರ ಅನ್ವಯ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.