23/12/2024

Law Guide Kannada

Online Guide

ಬಿಎನ್​ಎಸ್​ಎಸ್​ ಜಾರಿ ಬಳಿಕ ಸಿಆರ್​ಪಿಸಿ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲು ಅನುಮತಿಸಲಾಗದು : ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌)- 2023 ಜಾರಿ ನಂತರ ಪೊಲೀಸರು ಹಿಂದಿನ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲು ಅನುಮತಿಸಲಾಗದು ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್‌, ಬಿಎನ್‌ಎಸ್‌ಎಸ್ ಜಾರಿಗೆ ಬಂದ ದಿನ 2024ರ ಜುಲೈ 1ರಂದು ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಸಿಆರ್‌ಪಿಸಿ ಅಡಿಯಲ್ಲಿ ರಾಜ್ಯದಲ್ಲಿ ದಾಖಲಾಗಿದ್ದ ಮೊದಲ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಲಿಂಗಸುಗೂರು ನ್ಯಾಯಾಲಯದಲ್ಲಿರುವ ಪ್ರಕ್ರಿಯೆ ರದ್ದು ಕೋರಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಅರುಣ್‌ ಕುಮಾರ್‌ ಹೈಕೋರ್ಟ್ ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್‌. ನಟರಾಜನ್‌ ಅವರಿದ್ದ ಏಕಸದಸ್ಯ ಪೀಠವು, ನ್ಯಾಯಾಲಯಗಳು ಮತ್ತು ಪೊಲೀಸ್‌ ಠಾಣೆಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿದೆ.

ಬಿಎನ್‌ಎಸ್‌ಎಸ್‌ ಜಾರಿಗೆ ಬಂದ ಮೇಲೆ ಸಿಆರ್‌ಪಿಸಿ ಸೆಕ್ಷನ್‌ 154ರಡಿ ಪೊಲೀಸರು ದಾಖಲಿಸಿಕೊಂಡಿದ್ದ ಎಫ್‌ಐಆರ್‌ ರದ್ದುಪಡಿಸಲಾಗುತ್ತಿದೆ. ಆದರೆ, ದೂರಿನ ಗಂಭೀರತೆ ಆಧರಿಸಿ ಪ್ರಕರಣವನ್ನು ಪೊಲೀಸರಿಗೆ ಹಿಂದಿರುಗಿಸಲಾಗುತ್ತಿದ್ದು, ಸಿಆರ್‌ಪಿಸಿ ಸೆಕ್ಷನ್‌ 154 ಬದಲಿಗೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 173 ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 193ರಡಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು,” ಎಂದು ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಯಾವುದೇ ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸಲು ಎಫ್‌ಐಆರ್‌ ಮೂಲ ದಾಖಲೆ ಆಗಲಿದೆ. ಅಲ್ಲದೆ, ಆರೋಪಿಗಳ ವಿರುದ್ಧ ದಾಖಲಾಗಿರುವ ದೂರಿನ ತನಿಖೆಗೆ ಎಫ್‌ಐಆರ್‌ ತಳಹದಿ ಆಗಿರುತ್ತದೆ. ಆದರೆ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 176ರಡಿ ಬರುವ ಪ್ರಕರಣವನ್ನು ಸಿಆರ್‌ಪಿಸಿ ಸೆಕ್ಷನ್‌ 154ರಡಿ ತನಿಖೆ ನಡೆಸುವುದು ಸರಿಯಲ್ಲ. ಬಿಎನ್‌ಎಸ್‌ಎಸ್‌ ಜಾರಿಗೆ ಬಂದ 2024ರ ಜುಲೈ 1 ಮತ್ತು ಆನಂತರ ಸಿಆರ್‌ಪಿಸಿ ಅಡಿ ಎಫ್‌ಐಆರ್‌ ದಾಖಲಿಸುವುದು ಸರಿಪಡಿಸಬಹುದಾದ ದೋಷವೆಂದು ಹೇಳಲು ಸಾಧ್ಯವಿಲ್ಲ. ಬಿಎನ್‌ಎಸ್‌ಎಸ್‌ ಜಾರಿಗೆ ಬಂದ ಮೇಲೆ ಸಿಆರ್‌ಪಿಸಿ ಅಡಿ ದಾಖಲಾಗುವ ಎಫ್‌ಐಆರ್‌ ಸಮರ್ಥನೀಯವಲ್ಲ ಹಾಗೂ ಅದು ವಜಾಗೆ ಅರ್ಹವಾಗಿದೆ,” ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಬಿಎನ್‌ಎಸ್‌ಎಸ್‌ ಜಾರಿಗೆ ಬರುವ ಮೊದಲಿನ ಅಪೀಲು, ವಿಚಾರಣಾ ಅರ್ಜಿಗಳು, ತನಿಖೆ ಬಾಕಿ ಇರುವ ಪ್ರಕರಣಗಳನ್ನು ಸಿಆರ್‌ಪಿಸಿ ಅಡಿಯಲ್ಲಿ ಇತ್ಯರ್ಥಪಡಿಸಿ ಅಂತಿಮ ವರದಿಯನ್ನು ಸಿಆರ್‌ಪಿಸಿ ಸೆಕ್ಷನ್‌ 173ರಡಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು.  ಸಿಆರ್‌ಪಿಸಿ, ಬಿಎನ್‌ಎಸ್‌ಎಸ್‌-2023, ಐಪಿಸಿ, ಬಿಎನ್‌ಎಸ್‌-2023 ವಿಚಾರದಲ್ಲಿ ಹೈಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳು ಅನುಸರಿಸಬೇಕು.
ಹೈಕೋರ್ಟ್‌ನ ಈ ಆದೇಶವನ್ನು ಡಿಜಿಪಿ-ಐಜಿಪಿ ರಾಜ್ಯದ ಎಲ್ಲಾಪೊಲೀಸ್‌ ಠಾಣೆಗಳಿಗೆ ಕಳುಹಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು…?
ರಾಯಚೂರು ಜಿಲ್ಲೆ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತ್ರಸ್ತ ಮಹಿಳೆ ನರ್ಸ್‌ ಆಗಿ ಹಾಗೂ ಆರೋಪಿತ ಅರ್ಜಿದಾರ ‘ಡಿ’ ಗ್ರೂಪ್‌ ನೌಕರರಾಗಿ ಇಬ್ಬರು ಸೇವೆ ಸಲ್ಲಿಸುತ್ತಿದ್ದರು. 2021ರ ಮಾ. 30ರಂದು ಸಂತ್ರಸ್ತೆಯ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ವೇಳೆ ಆರೋಪಿ ಅರುಣ್‌ ಕುಮಾರ್‌ ಆಕೆಗೆ ಸಹಾಯ ಮಾಡಿದ್ದರು. ಈ ಮಧ್ಯೆ, ಆತ ಸಂತ್ರಸ್ತೆಯ ಮನೆಗೆ ಹೋಗಿ ಬರುವುದು ಹೆಚ್ಚಾಗಿತ್ತು.
ಮದುವೆಯಾಗುವುದಾಗಿ ನಂಬಿಸಿ ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿ ತನ್ನ ಇಚ್ಛೆಗೆ ವಿರುದ್ಧವಾಗಿ 2021ರ ಜೂ.24ರಂದು ಅತ್ಯಾಚಾರ ನಡೆಸಿರುತ್ತಾನೆ. ಜತೆಗೆ ತನ್ನಿಂದ 11.43 ಲಕ್ಷ ರೂ. ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾನೆ. ಹಣ ವಾಪಸ್‌ ನೀಡಿಲ್ಲ, ಮದುವೆಯೂ ಆಗದೆ ಸತಾಯಿಸಿರುತ್ತಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಳು. ಲಿಂಗಸುಗೂರು ಠಾಣೆ ಪೊಲೀಸರು 2024ರ ಜುಲೈ 1ರಂದು ಎಫ್‌ಐಆರ್‌ ದಾಖಲಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.