ಲೈಸೆನ್ಸ್, FC’ ಇಲ್ಲದಿದ್ರೂ ಸಂತ್ರಸ್ತರಿಗೆ `ವಿಮಾ’ ಪರಿಹಾರ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಅಪಘಾತ ನಡೆದ ಸಂದರ್ಭದಲ್ಲಿ ವಾಹನಕ್ಕೆ ಪರವಾನಗಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ವಿಮಾ ಕಂಪನಿ ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಪಘಾತಕ್ಕೊಳಗಾದ ವಾಹನಕ್ಕೆ ಎಫ್ಸಿ ಇಲ್ಲದಿದ್ದರೂ ಪರಿಹಾರಕ್ಕೆ ಸೂಚಿಸಿದ್ದ ಆದೇಶ ಪ್ರಶ್ನಿಸಿ ಶ್ರೀರಾಮ ಜನರಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿತ್ತು. ವಾಹನ ಮಾಲೀಕರು ತನ್ನ ವಾಹನವನ್ನು ರಸ್ತೆಗಿಳಿಸುವ ವೇಳೆ ಪರವಾನಗಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿಲ್ಲ. ಇದು ವಾಹನ ಮಾಲೀಕರ ಮೂಲಭೂತ ಉಲ್ಲಂಘನೆಯಾಗಿದೆ. ಇಲ್ಲಿ ವಾಹನ ಮಾಲೀಕರ ತಪ್ಪೂ ಇದೆ. ಹಾಗಾಗಿ, ವಿಮಾ ಕಂಪನಿಗಳ ಸಂಪೂರ್ಣ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಮಾಲೀಕರೇ ಪಾವತಿ ಮಾಡಬೇಕು’ ಎಂದು ವಿಮಾ ಕಂಪನಿಯು ವಾದ ಮಂಡಿಸಿತ್ತು.
ಆದರೆ ಈ ಅರ್ಜಿ ವಿಚಾರಣೆ ನಡೆಸಿ ವಿಮಾಕಂಪನಿಯ ವಾದ ತಿರಸ್ಕರಿಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ, ಸದೃಢ ಪ್ರಮಾಣ ಪತ್ರ ಮತ್ತು ನೋಂದಣಿ, ರಹದಾರಿ ಪರವಾನಗಿ ನವೀಕರಣ ಮಾಡದೆ ವಾಹನವನ್ನು ರಸ್ತೆಗಿಳಿಸಿರುವುದು ಮಾಲೀಕನ ತಪ್ಪು. ಆದರೆ, ಈ ಒಂದು ಕಾರಣಕ್ಕೆ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ವಿಮಾ ಕಂಪೆನಿಯು ಘಟನೆಯಲ್ಲಿ ಮೃತಪಟ್ಟಿರುವ ಸಂತ್ರಸ್ತ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದೆ. ಅಲ್ಲದೆ, ಪರಿಹಾರದ ಮೊತ್ತವನ್ನು ನಂತರ ವಾಹನ ಮಾಲೀಕರಿಂದ ವಿಮಾ ಕಂಪನಿ ವಸೂಲಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಕೇಂದ್ರ ಮೋಟಾರು ವಾಹನಗಳ (CMV) ನಿಯಮಗಳು. ನ್ಯಾಶನಲ್ ಇನ್ಶೂರೆನ್ಸ್ ಕಂ.ಲಿ., ವಿ. ಸ್ವರಣ್ ಸಿಂಗ್ ಮತ್ತು ಇತರರು (2004) ಮತ್ತು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ.ಲಿ., ಬಿಜಾಪುರ ವರ್ಸಸ್ ಯಲ್ಲವ್ವ ಮತ್ತು ಇನ್ನೊಬ್ಬ (2020) ನಲ್ಲಿ ಹೈಕೋರ್ಟ್ ಪೂರ್ಣ ಪೀಠದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಶಿವಶಂಕರೇಗೌಡ ಆದೇಶ ಪ್ರಕಟಿಸಿದ್ದಾರೆ.
ಪ್ರಕರಣದ ವಿವರ…
2013ರ ಜೂನ್ 17 ರಂದು ಹೊಸಕೋಟೆ-ಚಿಕ್ಕತಿರುಪತಿ ಮಾರ್ಗದಲ್ಲಿ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಸೈಕಲ್ ಸವಾರ ನಂದೀಶಪ್ಪ ಎಂಬುವರಿಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಕುಟುಂಬಸ್ಥರಿಗೆ 13.88 ಲಕ್ಷ ರೂ. ಪರಿಹಾರ ನೀಡಲು ಸರಕು ಸಾಗಣೆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿದ್ದ ಶ್ರೀರಾಮ ಜನರಲ್ ವಿಮಾ ಕಂಪನಿಗೆ ಸೂಚಿಸಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ