23/12/2024

Law Guide Kannada

Online Guide

ತಾಯಿಗೆ ತಲಾ 7 ಲಕ್ಷ ಜೀವನಾಂಶ ನೀಡಿ : ಮಗ-ಮೊಮ್ಮಗಳಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ 85 ವರ್ಷದ ಅಪ್ಪಾರಂಡ ಶಾಂತಿ ಬೋಪಣ್ಣ ಅವರ ಜೀವನ ನಿರ್ವಹಣೆಗಾಗಿ ಅವರ ಮಗ ಮತ್ತು ಮೊಮ್ಮಗಳು ವರ್ಷವೊಂದಕ್ಕೆ ತಲಾ 7 ಲಕ್ಷ ರೂ ಪಾವತಿಸಬೇಕು ಎಂದು ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಜೀವನಾಂಶ ಪಾವತಿಗೆ ಹೈಕೋರ್ಟ್ ಏಕಸದಸ್ಯಪೀಠದ ನೀಡಿದ್ದ ಆದೇಶ ರದ್ದು ಕೋರಿ ಶಾಂತಿ ಬೋಪಣ್ಣ ಅವರ ಮಗ ಎ.ಬಿ. ಗಣಪತಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಿಜೆ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠವು ವಾದ- ಪ್ರತಿವಾದ ಆಲಿಸಿ , ”ಈ ಪ್ರಕರಣ ಸಂಬಂಧ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನೀಡಿರುವ ಆದೇಶ ಸಂಪೂರ್ಣ ಸರಿ ಇದೆ. ಶಾಂತಿ ಬೋಪಣ್ಣ ಅವರ ಜೀವನಾಂಶಕ್ಕೆ ಸಂಬಂಧಿಸಿದಂತೆ ಅವರ ಮಗ ಮತ್ತು ಮೊಮ್ಮಗಳು ವರ್ಷವೊಂದಕ್ಕೆ ತಲಾ 7 ಲಕ್ಷ ರೂ. ಪಾವತಿಸಬೇಕೆಂಬ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯ ಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದು ಹೇಳಿ ಆದೇಶವನ್ನ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಹೆರೂರು ಎಸ್ಟೇಟ್ನ ಅಪ್ಪಾರಂಡ ಶಾಂತಿ ಬೋಪಣ್ಣ ತಾವು ಹೊಂದಿದ್ದ 22 ಎಕರೆ ಕಾಫಿ ಎಸ್ಟೇಟ್ ಅನ್ನು ತಮ್ಮ ಮಗ ಎ.ಬಿ. ಗಣಪತಿ ಹಾಗೂ ಮೊಮ್ಮಗಳಾದ ಪೂಜಾ ಅಲಿಯಾಸ್ ಸಂಜನಾ ಸುಬ್ಬಯ್ಯಗೆ 2016ರಲ್ಲಿ ‘ದಾನಪತ್ರ’ದ ರೂಪದಲ್ಲಿ ನೀಡಿದ್ದರು.

ಆಗ ಅಪ್ಪಾರಂಡ ಶಾಂತಿ ಬೋಪಣ್ಣ ಜೀವನ ನಿರ್ವಹಣೆಗೆ ವಾರ್ಷಿಕ ತಲಾ 7 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸುವುದಾಗಿ ಗಣಪತಿ ಹಾಗೂ ಸಂಜನಾ ಭರವಸೆ ನೀಡಿದ್ದರು. ಅಂತೆಯೇ, 2016ರಿಂದ 2019ರವರೆಗೆ ಹಣ ಪಾವತಿಸಿದ್ದರು. ತದನಂತರ ಹಣ ನೀಡಿರಲಿಲ್ಲ.

ಈ ನಡುವೆ ಗಣಪತಿ ಹಾಗೂ ಸಂಜನಾ ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಸಂಗತಿ ಶಾಂತಿ ಬೋಪಣ್ಣ ತಿಳಿದು ಬಂದಿತ್ತು. ಹಾಗಾಗಿ, ದಾನಪತ್ರ ರದ್ದುಪಡಿಸಬೇಕೆಂದು ಕೋರಿ ಅವರು, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಮಂಡಳಿಯ ಪ್ರತಿನಿಧಿಯೂ ಆದ ಕೊಡಗು ಜಿಲ್ಲೆಯ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಉಪವಿಭಾಗಾಧಿಕಾರಿ 2021ರ ಸೆ. 15ರಂದು ದಾನಪತ್ರ ರದ್ದುಗೊಳಿಸಿದ್ದನ್ನು ಜಿಲ್ಲಾಧಿಕಾರಿ ಆಸ್ತಿ ಹಕ್ಕನ್ನು ಮರು ಸ್ಥಾಪಿಸಲು ಆದೇಶಿಸಿ, ವೃದ್ಧ ತಾಯಿಯ ಜೀವಿತಾವಧಿವರೆಗೆ ವಾರ್ಷಿಕ ಜೀವನಾಂಶ ಪಾವತಿಸಲು ನಿರ್ದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಶಾಂತಿ ಬೋಪಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.