ನಿವೃತ್ತ CJI ರಂಜನ್ ಗೊಗಯ್ ಪ್ರತಿವಾದಿಯಾಗಿಸಿ ಪಿಐಎಲ್: ಸುಪ್ರೀಂ ಕೋರ್ಟ್ ಗರಂ
ನವದೆಹಲಿ: ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಪಿಐಎಲ್ ( ಸಾರ್ವಜನಿಕ ಹಿತಾಸಕ್ತಿ ಅರ್ಜಿ)ವೊಂದರಲ್ಲಿ ಪ್ರತಿವಾದಿಯನ್ನಾಗಿಸಿದ್ದಕ್ಕೆ ಹಾಗೂ ಅವರ ವಿರುದ್ಧ ಆಂತರಿಕ ವಿಚಾರಣೆಗೆ ಆದೇಶಿಸುವಂತೆ ಮನವಿ ಮಾಡಿದ್ದ ಅರ್ಜಿದಾರನ ವಿರುದ್ದ ಸುಪ್ರೀಂಕೋರ್ಟ್ ಗರಂ ಆಗಿ ತರಾಟೆ ತೆಗೆದುಕೊಂಡಿದೆ.
ತಮ್ಮನ್ನು ಸೇವೆಯಿಂದ ತೆಗೆದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ಪೀಠವು ಈ ಹಿಂದೆ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇದಾದ ನಂತರ ಅರ್ಜಿದಾರರು ಪಿಐಎಲ್ ಸಲ್ಲಿಸಿ ನ್ಯಾ. ರಂಜನ್ ಗೊಗೊಯಿ ಅವರನ್ನ ಪ್ರತಿವಾದಿಯಾಗಿಸಿದ್ದರು. ಅಲ್ಲದೆ ಅವರ ವಿರುದ್ಧ ಆಂತರಿಕ ವಿಚಾರಣೆಗೆ ಆದೇಶಿಸುವಂತೆ ಮನವಿ ಮಾಡಿದ್ದರು.
ಈ ಕುರಿತು ವಿಚಾರಣೆ ವೇಳೆ ಪುಣೆ ಮೂಲದ ಅರ್ಜಿದಾರರಿಗೆ ಕ್ಲಾಸ್ ತೆಗೆದುಕೊಂಡ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ಭಾರತದ’ನ್ಯಾಯಮೂರ್ತಿಯೊಬ್ಬರನ್ನು ಪ್ರತಿವಾದಿಯನ್ನಾಗಿಸಿ ನೀವು ಪಿಐಎಲ್ ಸಲ್ಲಿಸಿದ್ದು ಹೇಗೆ? ತುಸುವಾದರೂ ಘನತೆ ಇರಬೇಕು. ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ಆಗಬೇಕು ಎಂದು ಹೀಗೇ ಸುಮ್ಮನೆ ಹೇಳಲು ಅವಕಾಶವಿಲ್ಲ. ಗೊಗೊಯಿ ಅವರು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಆಗಿದ್ದವರು ಎಂದು ಹೇಳಿತು.
ರಂಜನ್ ಗೊಗೊಯಿ ಅವರು ನಿವೃತ್ತ ಸಿಜೆಐ. ನ್ಯಾಯಪೀಠದ ಎದುರು ನಿಮಗೆ ಜಯ ಸಿಗಲಿಲ್ಲ ಎಂಬ ಕಾರಣಕ್ಕೆ ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ನಡೆಯಬೇಕು ಎಂದು ಹೇಳಲು ಅವಕಾಶ ಇಲ್ಲ. ಇದನ್ನು ನಾವು ಸಹಿಸುವುದಿಲ್ಲ’ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ರಂಜನ್ ಗೊಗಯ್ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ