23/12/2024

Law Guide Kannada

Online Guide

ಸಾರ್ವಜನಿಕವಾಗಿ ಸೂಕ್ಷ್ಮ ಪ್ರಕರಣಗಳ ಆದೇಶ ಪ್ರಕಟಿಸುವುದಕ್ಕೆ ಹೈಕೋರ್ಟ್ ತಡೆ: ಮಹತ್ವದ ಆದೇಶ

ಚಂಡಿಗಢ: ಸೂಕ್ಷ್ಮ ಪ್ರಕರಣಗಳ ಆದೇಶಗಳನ್ನ ಸಾರ್ವಜನಿಕವಾಗಿ ಪ್ರಕಟಿಸಿಬಾರದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸೂಕ್ಷ್ಮ ಪ್ರಕರಣಗಳ ಆದೇಶಗಳು ಮತ್ತು ತೀರ್ಪುಗಳನ್ನು ನ್ಯಾಯಾಲಯಗಳ ಅಧಿಕೃತ ಜಾಲತಾಣ ಮತ್ತಿತರ ಕಡೆಗಳಲ್ಲಿ ಪ್ರಕಟಿಸುವುದರ ವಿರುದ್ಧ ತಾನು ನೀಡಿದ್ದ ಆಡಳಿತಾತ್ಮಕ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿರಸ್ಕರಿಸಿ ಸಾರ್ವಜನಿಕವಾಗಿ ಸೂಕ್ಷ್ಮ ಪ್ರಕರಣಗಳ ಆದೇಶ ಪ್ರಕಟಿಸುವುದಕ್ಕೆ ತಡೆ ನೀಡಿದೆ.

ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಸೆಕ್ಷನ್ 73 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ನ ಸೆಕ್ಷನ್ 366 (3) ಅನ್ನು ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾ. ಅನಿಲ್ ಕ್ಷೇತ್ರಪಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠವು , ಲೈಂಗಿಕ ಅಪರಾಧಗಳು, ವೈವಾಹಿಕ ವಿವಾದಗಳು, ಅಧಿಕೃತ ರಹಸ್ಯ ಕಾಯ್ದೆ, ಬಾಲನ್ಯಾಯ ಕಾಯ್ದೆ, ಗುಪ್ತಚರ ಸಂಸ್ಥೆಗಳ ಕುರಿತ ಪ್ರಕರಣ, ಕೌಟುಂಬಿಕ ಹಿಂಸೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಪ್ರಕರಣ ಒಳಗೊಂಡ ಪ್ರಕರಣಗಳ ತೀರ್ಪು ಇಲ್ಲವೇ ಆದೇಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದು ತೀರ್ಪು ನೀಡಿದೆ.

ಸಂತ್ರಸ್ತರಿಗೆ ಅನಾಮಧೇಯವಾಗಿ ಉಳಿಯುವ ಹಕ್ಕು ನೇರವಾಗಿ ಅವರ ಅಸ್ತಿತ್ವ ಮತ್ತು ಘನತೆಗೆ ಸಂಬಂಧಿಸಿದೆ. ಅವರಿಗೂ ಎಲ್ಲರಂತೆ ಘನತೆಯುಕ್ತ ಬದುಕುವ ಹಕ್ಕಿದೆ. ಅವರಿಗೂ ವೈಯಕ್ತಿಕ ಸ್ವಾತಂತ್ರ ಇದೆ. ಮತ್ತು ಈ ವಿಷಯ ಮಾನವನ ಅಸ್ತಿತ್ವಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದ್ದು, ಉಳಿದೆಲ್ಲ ಮೂಲಭೂತ ಹಕ್ಕುಗಳು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಹಕ್ಕಿನೆದುರು ಗೌಣವಾಗುತ್ತವೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಇಂತಹ ಪ್ರಕರಣಗಳಲ್ಲಿ ಹಾಜರಾಗುವ ವಕೀಲರು ಆ ತೀರ್ಪುಗಳನ್ನು ಡೌನ್ ಲೋಡ್ ಮಾಡಲು ಹೈಕೋರ್ಟ್ ಜಾಲತಾಣದಲ್ಲಿ ವಿಶೇಷ ವಿಭಾಗ ಇದ್ದು, ಅದು ಸಾಮಾನ್ಯ ಜನರಿಗೆ ಲಭ್ಯ ಇರುವುದಿಲ್ಲ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.