23/12/2024

Law Guide Kannada

Online Guide

ಸರ್ಕಾರಿ ಶಾಲೆಯಲ್ಲೇ ಮಗನ ಮದುವೆ: ಶಿಕ್ಷಕಿಗೆ ವಿಚಿತ್ರ ಶಿಕ್ಷೆ ನೀಡಿದ ಕೋರ್ಟ್

ಹಿಮಾಚಲ ಪ್ರದೇಶ: ಹಿಂದಿನ ದಿನಗಳಲ್ಲಿ ಮನೆ ಮುಂಭಾಗದಲ್ಲೇ ಚಪ್ಪರ ಹಾಕಿ ಮದುವೆ ಸಮಾರಂಭವನ್ನ ನೆರವೇರಿಸುತ್ತಿದ್ದರು. ಕಾಲ ಬದಲಾದಂತೆ ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭ ಇನ್ನಿತರ ಕಾರ್ಯಕ್ರಮಗಳನ್ನ ಚೌಟ್ರಿಗಳಲ್ಲಿ ಕಲ್ಯಾಣ ಮಂಟಪಗಳಲ್ಲಿ ನಡೆಸುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ಮಗನ ಮದುವೆಯನ್ನ ಸರ್ಕಾರಿ ಶಾಲೆ ಆವರಣದಲ್ಲಿ ನೆರವೇರಿಸಿ ಇದೀಗ ಹೈಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿದ್ದಾರೆ.

ಹೌದು ಈ ಘಟನೆ ನಡೆದಿರುವುದು ಹಿಮಾಚಲ ಪ್ರದೇಶದ ಹಮೀಪುರ ಜಿಲ್ಲೆಯ ಸುಲ್ಯಾಂವ್ ಗ್ರಾಮದಲ್ಲಿ. ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ತನ್ನ ಮಗನ ಮದುವೆಯನ್ನು ಆಯೋಜಿಸಿದ ಶಿಕ್ಷಕಿಗೆ ವಿಚಿತ್ರ ಶಿಕ್ಷೆಯನ್ನು ನೀಡುವ ಮೂಲಕ ಹಿಮಾಚಲ ಪ್ರದೇಶ ಹೈಕೋರ್ಟ್ ಗಮನ ಸೆಳೆದಿದೆ.

ಹಿಮಾಚಲ ಪ್ರದೇಶ ಹೈಕೋರ್ಟ್ನ ಅಜಯ ಮೋಹನ್ ಗೋಯಲ್ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ತಪ್ರೊಪ್ಪಿಕೊಂಡ ಶಿಕ್ಷಕಿಗೆ ನಾಲ್ಕು ವಾರಗಳ ಒಳಗೆ ಶಾಲೆಗೆ ಎರಡು ನೀರಿನ ಶುದ್ದೀಕರಣ ಯಂತ್ರ ಅಳವಡಿಸಲು ಸೂಚಿಸಿದೆ.

ಪ್ರಕರಣದ ವಿವರ ಹೀಗಿದೆ…
ಹಿಮಾಚಲ ಪ್ರದೇಶದ ಹಮೀಪುರ ಜಿಲ್ಲೆಯ ಸುಲ್ಯಾಂವ್ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಮಗನ ವಿವಾಹವನ್ನು ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಸಹಿತ ಎಲ್ಲ ಶಿಕಕರು, ಸಿಬ್ಬಂದಿ ಹಾಜರಿದ್ದರು. ಈ ಮದುವೆ ಸಮಾರಂಭದ ಬಗ್ಗೆ ಶಶಿಕಾಂತ್ ಎಂಬವರು ಶಿಕ್ಷಣ ಇಲಾಖೆಗೆ ಇ ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದರು.

ಶಿಕ್ಷಣ ಇಲಾಖೆ ಅಧಿಕಾರಿಗಳು ತಪಾಸಣೆಗಾಗಿ ಶಾಲೆಗೆ ಭೇಟಿ ನೀಡಿದ್ದು, ಮದುವೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಆದರೆ, ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಈ ಘಟನೆ ಮತ್ತು ನಡೆಸಿದ ತನಿಖೆಯ ಬಗ್ಗೆ ಆರ್ಟಿಐ ಮೂಲಕ ಮಾಹಿತಿ ಪಡೆದ ಶಶಿಕಾಂತ್ ಹೈಕೋರ್ಟ್ಲ್ಲಿ ಅರ್ಜಿ ಸಲ್ಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹಿಮಾಚಲ ಹೈಕೋರ್ಟ್, ಶಿಕ್ಷಕಿ ತಪ್ಪೊಪ್ಪಿಕೊಂಡರೂ ಎರಡು ಶುದ್ಧ ನೀರಿನ ಯಂತ್ರವನ್ನು ಅಳವಡಿಸುವಂತೆ ಆದೇಶ ಹೊರಡಿಸಿದೆ. ಆದೇಶವನ್ನು ನಾಲ್ಕು ವಾರಗಳಲ್ಲಿ ಪಾಲಿಸಿ ಹೈಕೋರ್ಟ್ ಕಚೇರಿಗೆ ವರದಿ ನೀಡುವಂತೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.