23/12/2024

Law Guide Kannada

Online Guide

ಇಬ್ಬರು ಅಮಾಯಕರ ವಿರುದ್ದ ಸುಳ್ಳು ಕೇಸ್: ನಾಲ್ವರು ಪೊಲೀಸರು ಸಸ್ಪೆಂಡ್

ಬೆಂಗಳೂರು: ಮಾದಕ ವಸ್ತು ಮಾರಾಟ ಆರೋಪದಡಿ ಇಬ್ಬರು ಅಮಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನ  ಅಮಾನತು ಮಾಡಲಾಗಿದೆ. 

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ. ರಾಜು, ಕಾನ್ಸ್ಟೆಬಲ್ ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಅವರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆದೇಶ ಹೊರಡಿಸಿದ್ದಾರೆ.

ಗಾಂಜಾ ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳ ವಿರುದ್ಧ ಮಾದಕ ವಸ್ತು ಮಾರಾಟ ಆರೋಪದಡಿ ಅಮಾಯಕರ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿತ್ತು.  ಪ್ರಕರಣ ದಾಖಲಿಸಿದ್ದ ಹಾಕಿದ್ದ ಬನಶಂಕರಿ ಪೊಲೀಸ್ ಠಾಣೆಯ ನಾಲ್ವರು  ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಆಗಿದ್ದಾರೆ. ನಾಲ್ವರು ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದೆ.

ಘಟನೆ ಹಿನ್ನೆಲೆ
ಕದಿರೇನಹಳ್ಳಿಯಲ್ಲಿ ಆಗಸ್ಟ್ 9 ರಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ಬನಶಂಕರಿ ಪೊಲೀಸರು ವಶಕ್ಕೆ  ಬಂಧಿಸಿದ್ದರು. ಆರೋಪಿತರ ದ್ವಿಚಕ ವಾಹನದಲ್ಲಿ ಇದ್ದ ಸುಮಾರು 400 ಗ್ರಾಂ ತೂಕದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ಆರೋಪಿತರ ಬಂಧನದಿಂದ ಕಂಗಾಲಾದ ಕುಟುಂಬ ಸದಸ್ಯರು ಬೆಂಗಳೂರು ನಗರ ಪೊಲೀಸ್ ಅಯುಕ್ತರಿಗೆ ದೂರು ನೀಡಿ ತಮ್ಮವರು ನಿರಪರಾಧಿಗಳಾಗಿದ್ದು, ಪೋಲೀಸ್ ಬಾತ್ಮೀದಾರ ರಾಜನ್ ಎಂಬಾತನ ಕುಮ್ಮಕ್ಕಿನಿಂದ ಆರೋಪಿಗಳ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.

ಈ ದೂರನ್ನು ಪರಿಗಣಿಸಿದ ಬೆಂಗಳೂರು ಪೊಲೀಸ್ ಆಯುಕ್ತರು, ಬಾತ್ಮೀದಾರ ರಾಜನ್ ಅವರ ತನಿಖೆಗೆ ಸೂಚಿಸಿದ್ದರು. ತನಿಖೆ ವೇಳೆ, ಪೊಲೀಸ್ ಬಾತ್ಮೀದಾರ ರಾಜನ್ ಸುಳ್ಳು ಮಾಹಿತಿ ನೀಡಿದ್ದು ಬಯಲಾಗಿತ್ತು. ಈ ಮಾಹಿತಿ ಮೇರೆಗೆ ಪೊಲೀಸರು ಕರ್ತವ್ಯ ಲೋಪ ಎಸಗಿರುವುದು ಸಾಬೀತಾದ ಹಿನ್ನೆಲೆ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ
Copyright © All rights reserved. | Newsphere by AF themes.