23/12/2024

Law Guide Kannada

Online Guide

ಸೊಸೆಗೆ ಅನುಕಂಪದ ಆಧಾರದ ಮೇಲೆ ಉದ್ಯೋಗದ ಹಕ್ಕಿದೆಯೇ..? ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬೆಂಗಳೂರು: ಕುಟುಂಬದ ವ್ಯಾಖ್ಯಾನದಲ್ಲಿ ನಿರ್ದಿಷ್ಟ ಸಂಬಂಧಿಗಳನ್ನು ಮಾತ್ರ ಸೇರಿಸಲಾಗಿದೆ. ಆದರೆ, ಸೊಸೆಯನ್ನು ಉಲ್ಲೇಖಿಸಿಲ್ಲ. ಹಾಗಾಗಿ, ಸೊಸೆಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಿ ಎಂದು ನಿರ್ದೇಶಿಸುವುದಕ್ಕೆ ಅವಕಾಶವಿಲ್ಲ. ಅನುಕಂಪದ ನೇಮಕಾತಿಯ ಉದ್ದೇಶಗಳಿಗಾಗಿ ಸೊಸೆಯನ್ನು ಕುಟುಂಬದ ಸದಸ್ಯರಾಗಿ ಪರಿಗಣಿಸಲಾಗುವುದಿಲ್ಲ. ಸೊಸೆಗೆ `ಅನುಕಂಪದ ಆಧಾರದ ಮೇಲೆ ಉದ್ಯೋಗದ ಹಕ್ಕಿಲ್ಲ’ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅನುಕಂಪದ ಆಧಾರದ ಮೇಲೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಹುದ್ದೆ ಕೋರಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪ್ರಿಯಾಂಕಾ ಹುಲಮನಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.

ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದ ತಮ್ಮ ಅತ್ತೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪ್ರಿಯಾಂಕ ಹಲಮನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ‘ಕುಟುಂಬ’ ಪದದ ವ್ಯಾಪ್ತಿಯಲ್ಲಿ ಸೊಸೆ ಬರುವುದಿಲ್ಲ. ಹಾಗಾಗಿ, ಸೊಸೆ ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕೆ ಅರ್ಹರಲ್ಲ ಎಂದು ತಿಳಿಸಿದೆ.

ಕಾನೂನಿನ ಅಡಿಯಲ್ಲಿ ಕುಟುಂಬ ಎಂಬ ಪದದ ವ್ಯಾಖ್ಯಾನದ ಅಡಿಯಲ್ಲಿ ನಿರ್ದಿಷ್ಟ ಸಂಬಂಧಿಕರನ್ನು ಸೇರಿಸಿದ್ದಾರೆ. ಸೊಸೆಯನ್ನು ಕುಟುಂಬದ ವ್ಯಾಖ್ಯಾನದಲ್ಲಿ ಬರುವುದಿಲ್ಲ ಅವರು ವ್ಯಾಪ್ತಿಯಿಂದ ಹೊರಗಿದ್ದಾರೆ. ಸೊಸೆಗೆ ಅನುಕಂಪದ ಹುದ್ದೆ ನೀಡುವ ಸಲುವಾಗಿ ಕುಟುಂಬ ವ್ಯಾಖ್ಯೆಯ ಅಡಿಯಲ್ಲಿ ಸೇರಿಸಿ, ವ್ಯಾಖ್ಯಾನವನ್ನು ವಿಸ್ತರಿಸಿ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅರ್ಜಿದಾರರ ಅತ್ತೆ ಉದ್ಯೋಗ ಮಾಡುತ್ತಿದ್ದರು. ಕೊರೋನಾ ಸೋಂಕಿಗೆ ತುತ್ತಾಗಿ 2021ರ ಮೇ 2ರಂದು ಅವರು ಮೃತಪಟ್ಟರು. ತದ ನಂತರ ಪತಿ ಕೂಡ ಕೊರೋನಾಗೆ ಬಲಿಯಾದರು. ಹೀಗಾಗಿ, ಅನುಕಂಪದ ಅಡಿ ಉದ್ಯೋಗ ಕೋರಿ ಸೊಸೆ ಪ್ರಿಯಾಂಕ ಅರ್ಜಿ ಸಲ್ಲಿಸಿದ್ದರು. ಆದರೆ, ಇಲಾಖೆಯು ಪ್ರಿಯಾಂಕ ಅವರ ಮನವಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಿಯಾಂಕ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಕರ್ನಾಟಕ ಅಡಳಿತ ನ್ಯಾಯಮಂಡಳಿಯೂ ಈ ಅರ್ಜಿಯನ್ನು ತಿರಸ್ಕರಿಸಿತು. ಟ್ರಿಬ್ಯೂನಲ್ ನ ಆದೇಶದ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯಲ್ಲಿ ಅವರು ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ಉದ್ಯೋಗ) ನಿಯಮ 2021 ಪ್ರಕಾರ ಕುಟುಂಬದ ವ್ಯಾಖ್ಯಾನದಲ್ಲಿ ಸೊಸೆಯನ್ನು ಸೇರಿಸಬೇಕು ಮತ್ತು ತಮಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.