ಜಾಮೀನು ನೀಡುವ ವೇಳೆ ಆರೋಪಿಯ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಿ – ಹೈಕೋರ್ಟ್ ಸೂಚನೆ
ಅಲಹಾಬಾದ್: ಜಾಮೀನು ಕೋರಿದ ಆರೋಪಿಗಳ ಸಾಮಾಜಿಕ- ಆರ್ಥಿಕ ಸ್ಥಿತಿ ಲೆಕ್ಕಿಸದೆ ಮನಸೋಇಚ್ಛೆ ಜಾಮೀನು ಷರತ್ತುಗಳನ್ನು ವಿಧಿಸಬಾರದು. ಆರೋಪಿಗಳಿಗೆ ಜಾಮೀನು ನೀಡುವ ವೇಳೆ ಶ್ಯೂರಿಟಿ ನಿಗದಿ ಮಾಡುವ ಮುನ್ನ ಅವರ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಲಯದಿಂದ ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲಾಗದ ಪರಿಸ್ಥಿತಿಯಿಂದಾಗಿ ಜೈಲಿನಲ್ಲಿಯೇ ಉಳಿದ್ದ ಆರೋಪಿ ಅರ್ಮಾನ್ ಮತ್ತೊಂದು ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಅಜಯ್ ಭಾನೋತ್ ಅವರಿದ್ದ ಪೀಠ, ಆರೋಪಿಗಳ ಜಾಮೀನು ಶ್ಯೂರಿಟಿ ನಿಗದಿಗೊಳಿಸುವಾಗ ಅವರ ಸಾಮಾಜಿಕ ಆರ್ಥಿಕ ಸ್ಥಿತಿ ಪರಿಗಣಿಸುವ ಸಂಬಂಧ ವಿವೇಚನೆ ಬಳಸುವುದು ವಿಚಾರಣಾ ನ್ಯಾಯಾಲಯಗಳ ಹೊಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಹಾಗೆಯೇ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಅವರಿಗೆ ಜಾಮೀನು ನೀಡುವಂತಿದ್ದರೆ, ಶ್ಯೂರಿಟಿ ವಿಧಿಸುವಾಗ ಎಚ್ಚರಿಕೆಯಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಅವಲೋಕಿಸಬೇಕು. ಇಲ್ಲದಿದ್ದರೆ ಜಾಮೀನು ನೀಡಿ ಪ್ರಯೋಜನವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಜೊತೆಗೆ ನ್ಯಾಯಾಲಯಗಳು ಯಾಂತ್ರಿಕವಾಗಿ ಜಾಮೀನು ಷರತ್ತುಗಳನ್ನು ವಿಧಿಸಬಾರದು. ಕಠಿಣ ಷರತ್ತುಗಳನ್ನು ವಿಧಿಸುವುದರಿಂದ ಅರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಸುಪ್ರೀಂ ಕೋರ್ಟ್ ಅರ್ವಿಂದ್ ಸಿಂಗ್ ವರ್ಸಸ್ ಉತ್ತರ ಪ್ರದೇಶ ಪ್ರಕರಣದಲ್ಲಿ ಇಂತಹ ಸಂದರ್ಭಗಳಲ್ಲಿ ಜಾಮೀನು ಷರತ್ತುಗಳನ್ನು ವಿಧಿಸುವ ಕುರಿತಂತೆ ಮಾರ್ಗಸೂಚಿಗಳನ್ನು ಹಾಕಿಕೊಟ್ಟಿದೆ. ನ್ಯಾಯಾಲಯಗಳು ಸುಪ್ರೀಂ ನಿರ್ದೇಶನಗಳನ್ನು ಪಾಲಿಸುವಲ್ಲಿ ಎಚ್ಚರ ತಪ್ಪಬಾರದು ಎಂದು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.
ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್, ಆರೋಪಿ ತನಿಖೆಗೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡಿದ್ದು ತಪ್ಪಿಸಿಕೊಂಡು ಓಡಿ ಹೋಗುವ ಸಾಧ್ಯತೆಗಳಿಲ್ಲ..ಹೀಗಾಗಿ ಆತನಿಗೆ ಕಠಿಣ ಷರತ್ತುಗಳನ್ನು ವಿಧಿಸುವ ಅಗತ್ಯವಿಲ್ಲ, ಆರೋಪಿ/ಅರ್ಜಿದಾರ ಸಾಕ್ಷ್ಯ ನಾಶಪಡಿಸಬಾರದು ಅಥವಾ ಸಾಕ್ಷಿಯ ಮೇಲೆ ಪ್ರಭಾವ ಬೀರಬಾರದು ಮತ್ತು ನಿಗದಿತ ದಿನಾಂಕಗಳನ್ನು ನ್ಯಾಯಾಲಯದ ಒಪ್ಪಿಗೆ ಇಲ್ಲದೇ ಗೈರುಹಾಜರಾಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.
ಉಳಿದ ಪ್ರಕರಣಗಳಲ್ಲಿ ಆರೋಪಿ ಪಡೆದುಕೊಂಡಿರುವ ಜಾಮೀನು ಆದೇಶಗಳ ಜಾರಿಗೆ ಅಗತ್ಯ ನೆರವು ನೀಡುವಂತೆ ಜಿಲ್ಲಾ ಕಾನೂನು ಸೇವಾ ಸಮಿತಿಗೆ ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ