23/12/2024

Law Guide Kannada

Online Guide

ಈ ರಾಜ್ಯದಲ್ಲಿ ವಕೀಲರಿಗೆ ಭರ್ಜರಿ ಗುಡ್ ನ್ಯೂಸ್: ಏನು ಗೊತ್ತೆ…?

ಜಾರ್ಖಂಡ್: ಜಾರ್ಖಂಡ್ ಸರ್ಕಾರ ವಕೀಲರಿಗೆ ವಿಮೆ, ಸ್ಟೈಫಂಡ್ ಮತ್ತು ಪಿಂಚಣಿ ಒದಗಿಸುವ ಮಹತ್ವದ ನಿರ್ಣಯವನ್ನು ಕೈಗೊಳ್ಳುವ ಮೂಲಕ ಭರ್ಜರಿ ಸಿಹಿಸುದ್ದಿ ನೀಡಿದೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, 3 ಮಹತ್ವದ ನಿರ್ಣಯಗಳು ಈ ಕೆಳಕಂಡತಿವೆ

  1. ವಕೀಲ ವೃತ್ತಿಯ ಆರಂಭದ ಹಂತದಲ್ಲಿ ಮೊದಲ ಐದು ವರ್ಷಗಳ ಕಾಲ ರಾಜ್ಯದ ಎಲ್ಲ ನೂತನ ವಕೀಲರಿಗೆ ಮಾಸಿಕ 5000 ರೂಪಾಯಿ ಸ್ಟೈಫಂಡ್.
  2. ರಾಜ್ಯದಲ್ಲಿ ವೃತ್ತಿನಿರತರಾಗಿರುವ ಎಲ್ಲ 30,000 ವಕೀಲರಿಗೆ 5 ಲಕ್ಷ ರೂಪಾಯಿ ಮೊತ್ತದ ವೈದ್ಯಕೀಯ ವಿಮಾ ರಕ್ಷಣೆ.
  3. 65 ವರ್ಷ ಮೀರಿದ ಎಲ್ಲ ವಕೀಲರಿಗೆ ತಿಂಗಳಿಗೆ 14,000 ರೂಪಾಯಿ ಪಿಂಚಣಿ ನೀಡಲು ಜಾರ್ಖಂಡ್ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.

ಅಲ್ಲಿನ ವಕೀಲರಿಗೆ ಇಂತಹ ಸೌಲಭ್ಯಗಳು ಸಿಗಲು ಜಾರ್ಖಂಡ್ ಅಡ್ವಕೇಟ್ ಜನರಲ್ ರಾಜೀವ್ ರಾಜನ್ ಅವರು ಸಾಕಷ್ಟು ಶ್ರಮಿಸಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಕೇರಳ ಸರ್ಕಾರ ರಾಜ್ಯದ ಯುವ ವಕೀಲರಿಗೆ ತಿಂಗಳಿಗೆ 3,000 ರೂಪಾಯಿ ಸ್ಟೈಫಂಡ್ ಯೋಜನೆಯನ್ನು ಪ್ರಾರಂಭಿಸಿದೆ. ವೃತ್ತಿ ಆರಂಭದ 3 ವರ್ಷದ ಒಳಗಿದ್ದು, ವಾರ್ಷಿಕ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಮತ್ತು 30ಕ್ಕಿಂತ ಕಡಿಮೆ ವಯೋಮಾನದ ವಕೀಲರು ಕೇರಳದಲ್ಲಿ ಮಾಸಿಕ 3,000 ರೂಪಾಯಿ ಪಡೆಯಲು ಅರ್ಹರಾಗಿದ್ದಾರೆ.

ಅದೇ ರೀತಿ ಇತ್ತೀಚೆಗೆ ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್ ರಾಜ್ಯಾದ್ಯಂತ ಎಲ್ಲಾ ವಕೀಲರ ಸಂಘಗಳು ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಫಂಡ್ ಅನ್ನು ಜಾರಿಗೆ ತರಲು ಒತ್ತಾಯಿಸಿ ಸುತ್ತೋಲೆ ಹೊರಡಿಸಿತ್ತು. ಪ್ರಮುಖ ನಗರಗಳಲ್ಲಿ ಜೂನಿಯರ್ ವಕೀಲರ ಸೇವೆಯನ್ನು ಬಳಸಿಕೊಳ್ಳುವ ಎಲ್ಲಾ ವಕೀಲರು ಮಾಸಿಕ 20,000 ರೂಪಾಯಿ ಸ್ಟೈಫಂಡ್ ಪಾವತಿಸಲು ಸೂಚಿಸಿತ್ತು.

ಇದೀಗ ಜಾರ್ಖಂಡ್ ರಾಜ್ಯವೂ ಕೂಡ ವಕೀಲರಿಗೆ ವಿಮೆ, ಸ್ಟೈಫಂಡ್ ಮತ್ತು ಪಿಂಚಣಿ ಒದಗಿಸುವ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.