23/12/2024

Law Guide Kannada

Online Guide

ಹೈಕೋರ್ಟ್’ಗಳಲ್ಲಿ ಇತ್ಯರ್ಥಕ್ಕಾಗಿ ಕಾಯುತ್ತಿವೆ 30 ವರ್ಷ’ಕ್ಕಿಂತ ಹಳೆಯದಾದ ಸುಮಾರು ’62 ಸಾವಿರ ಪ್ರಕರಣ’ಗಳು

ನವದೆಹಲಿ: ಭಾರತದ ನ್ಯಾಯಾಂಗ ವ್ಯವಸ್ಥೆಯ ವೇಗ ಕಡಿಮೆ ಎಂಬ ಟೀಕೆಗಳು ಕೇಳಿ ಬರುತ್ತಲೇ ಇವೆ. ಇದಕ್ಕೆ ಇಂಬು ನೀಡುವಂತ ಅಚ್ಚರಿಯ ಅಂಶವೊಂದು ಬಹಿರಂಗವಾಗಿದ್ದು, ದೇಶದ ವಿವಿಧ ಹೈಕೋರ್ಟ್​ಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ 62 ಸಾವಿರಕ್ಕೂ ಅಧಿಕ ಕೇಸ್​​ಗಳು ಬಾಕಿ ಉಳಿದಿವೆಯಂತೆ.

ಹೌದು, ಸುಮಾರು 62 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇನ್ನೂ ವಿಲೇವಾರಿಯಾಗದೆ ಇತ್ಯರ್ಥಕ್ಕಾಗಿ ಕಾಯುತ್ತಿವೆ. 1952 ರಲ್ಲಿ ದಾಖಲಾದ ಮೂರು ಪ್ರಕರಣಗಳು ಈವರೆಗೂ ಚುಕ್ತಾ ಆಗಿಲ್ಲ. ಅಂದರೆ, 72 ವರ್ಷಗಳಿಂದ ಅವು ಬಾಕಿ ಉಳಿದುಕೊಂಡಿದೆ.

ಮೂರು ಪ್ರಕರಣಗಳು 1952 ರಿಂದ ವಿಲೇವಾರಿಗಾಗಿ ಕಾಯುತ್ತಿವೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, 1954 ರಿಂದ ನಾಲ್ಕು ಪ್ರಕರಣಗಳು ಮತ್ತು 1955 ರಿಂದ ಒಂಬತ್ತು ಪ್ರಕರಣಗಳು ಹೈಕೋರ್ಟ್ಗಳಲ್ಲಿ ಬಾಕಿ ಉಳಿದಿವೆ.
1952ರಿಂದ ಬಾಕಿ ಇರುವ ಮೂರು ಪ್ರಕರಣಗಳಲ್ಲಿ ಎರಡು ಕಲ್ಕತ್ತಾ ಹೈಕೋರ್ಟ್ ಮತ್ತು ಒಂದು ಮದ್ರಾಸ್ ಹೈಕೋರ್ಟ್ ನಲ್ಲಿವೆ.

ಹೈಕೋರ್ಟ್ ಗಳಲ್ಲಿ 42.64 ಲಕ್ಷ ಸಿವಿಲ್ ಸ್ವರೂಪ ಮತ್ತು 15.94 ಲಕ್ಷ ಕ್ರಿಮಿನಲ್ ಸ್ವರೂಪದ ಪ್ರಕರಣಗಳು ಸೇರಿದಂತೆ 58.59 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್ಜೆಡಿಜಿ) ಪ್ರಕಾರ, ಹೈಕೋರ್ಟ್ಗಳಲ್ಲಿ 20 ರಿಂದ 30 ವರ್ಷಗಳಷ್ಟು ಹಳೆಯದಾದ ಸುಮಾರು 2.45 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ.

ರಾಷ್ಟ್ರಪತಿಗಳಿಂದ ಬೇಸರ….

ನ್ಯಾಯಾಂಗ ವ್ಯವಸ್ಥೆಯ ವೇಗದ ಬಗ್ಗೆ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ನ್ಯಾಯಾಂಗದಲ್ಲಿ “ಮುಂದೂಡುವ ಸಂಸ್ಕೃತಿಯಲ್ಲಿ” ಬದಲಾವಣೆಗೆ ಕರೆ ನೀಡಿ, ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳು ಮತ್ತು ಬ್ಯಾಕ್ಲಾಗ್ ಪ್ರಕರಣಗಳು ನ್ಯಾಯಾಂಗದ ಮುಂದೆ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.

“ಎಲ್ಲಾ ಪಾಲುದಾರರು ಈ ಸಮಸ್ಯೆಗೆ ಆದ್ಯತೆ ನೀಡುವ ಮೂಲಕ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಅವರು ಹೇಳಿದರು.

ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಭಾರತೀಯ ನ್ಯಾಯಾಲಯಗಳು “ತಾರೀಖ್ ಪೆ ತಾರೀಖ್ ಸಂಸ್ಕೃತಿ” ಯನ್ನು ಅನುಸರಿಸುತ್ತವೆ ಎಂಬ ಗ್ರಹಿಕೆಯನ್ನು ಮುರಿಯುವಂತೆ ಕರೆ ನೀಡಿದ್ದರು.

ಎನ್ಜೆಡಿಜಿಯಲ್ಲಿ ಉಲ್ಲೇಖಿಸಲಾದ ಬಾಕಿ ಇರುವ ಪ್ರಕರಣಗಳ ವಿಶ್ಲೇಷಣೆಯು ದಾವೆಯಲ್ಲಿ ಭಾಗಿಯಾಗಿರುವ ಪಕ್ಷಗಳು ಹಾಜರಿಲ್ಲ ಅಥವಾ ಪ್ರಕರಣವನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು. ಇಂತಹ 25 ರಿಂದ 30% ಪ್ರಕರಣಗಳನ್ನು ಒಂದೇ ಬಾರಿಗೆ ಮುಚ್ಚಬಹುದು ಎಂದು ತಿಳಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.