ಜಿಲ್ಲಾ ಕೋರ್ಟ್ ಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು: ಅಧೀನ ನ್ಯಾಯಾಲಯ ಎನ್ನಬಾರದು: CJI ಡಿ.ವೈ. ಚಂದ್ರಚೂಡ್ ಅಭಿಮತ…
ನವದೆಹಲಿ: ಜಿಲ್ಲಾ ಹಂತದ ಕೋರ್ಟ್ ಗಳು ನ್ಯಾಯಾಂಗ ವ್ಯವಸ್ಥೆ ಬೆನ್ನೆಲುಬು ಇದ್ದಂತೆ. ಈ ನ್ಯಾಯಾಲಯಗಳನ್ನು ‘ಅಧೀನ ನ್ಯಾಯಾಲಯಗಳು’ ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.
ಜಿಲ್ಲಾ ನ್ಯಾಯಾಲಯಗಳ ರಾಷ್ಟ್ರೀಯ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಜೆಐ ಚಂದ್ರಚೂಡ್, ಕಾನೂನಿಗೆ ಅನುಗುಣವಾದ ಆಡಳಿತದಲ್ಲಿ ಜಿಲ್ಲಾ ನ್ಯಾಯಾಲಯಗಳದ್ದು ಮಹತ್ವದ ಪಾತ್ರವಾಗಿದ್ದು, ನ್ಯಾಯ ಅರಸುವ ವ್ಯಕ್ತಿಗೆ ಮೊದಲು ಸಿಗುವುದು ಜಿಲ್ಲಾ ಹಂತದ ನ್ಯಾಯಾಲಯಗಳು. ಜಿಲ್ಲಾ ನ್ಯಾಯಾಲಯಗಳು ಬಹಳ ದೊಡ್ಡ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿ ಇವನ್ನು ನ್ಯಾಯಾಂಗದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬನ್ನು ಪೋಷಿಸಲು, ಜಿಲ್ಲಾ ನ್ಯಾಯಾಲಯಗಳನ್ನು ‘ಅಧೀನ’ ನ್ಯಾಯಾಲಯಗಳು ಎಂದು ಕರೆಯುವುದನ್ನು ನಿಲ್ಲಿಸಬೇಕು .ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ, ಬ್ರಿಟಿಷ್ ಕಾಲದ ಇನ್ನೊಂದು ಪಳೆಯುಳಿಕೆಯನ್ನು, ಅಂದರೆ ವಸಾಹತು ಮನಃಸ್ಥಿತಿಯಾದ ಅಧೀನತೆಯನ್ನು, ಹೂತುಹಾಕುವ ಕಾಲ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಾಂಗದ ಸೇವೆಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಳ….
ನ್ಯಾಯಾಂಗದ ಸೇವೆಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಾಗುತ್ತಿದೆ ‘ಕಳೆದ ಕೆಲವು ವರ್ಷಗಳಲ್ಲಿ ಜಿಲ್ಲಾ ನ್ಯಾಯಾಲಯಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಾಗಿದೆ. 2023ರಲ್ಲಿ ರಾಜಸ್ಥಾನದಲ್ಲಿ ನಡೆದ ಸಿವಿಲ್ ನ್ಯಾಯಾಧೀಶರ ಒಟ್ಟು ನೇಮಕಾತಿಯಲ್ಲಿ ಮಹಿಳೆಯರ ಪ್ರಮಾಣ ಶೇಕಡ 58ರಷ್ಟು ಇತ್ತು. 2023ರಲ್ಲಿ ದೆಹಲಿಯಲ್ಲಿ ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳಲ್ಲಿ ಮಹಿಳೆಯರ ಪ್ರಮಾಣವು ಶೇ 66ರಷ್ಟು ಆಗಿತ್ತು. ಕೇರಳದಲ್ಲಿ ಈಚೆಗೆ ನಡೆದ ನ್ಯಾಯಾಂಗ ಅಧಿಕಾರಿಗಳ ನೇಮಕಾತಿಯಲ್ಲಿ ಶೇಕಡ 72ರಷ್ಟು ಮಂದಿ ಮಹಿಳೆಯರಾಗಿದ್ದರು. ಉತ್ತರ ಪ್ರದೇಶದಲ್ಲಿ 2022ರ ಬ್ಯಾಚ್‌ನಲ್ಲಿ ಸಿವಿಲ್ ನ್ಯಾಯಾಧೀಶರ (ಕಿರಿಯ ವಿಭಾಗ) ನೇಮಕಾತಿಯಲ್ಲಿ ಮಹಿಳೆಯರ ಪ್ರಮಾಣವು ಶೇ 54ರಷ್ಟು ಇತ್ತು ಎಂದು ಉದಾಹರಣೆಯಾಗಿ ಉಲ್ಲೇಖಿಸಿರುವ ಈ ಅಂಕಿ-ಅಂಶಗಳು ಭವಿಷ್ಯದ ನ್ಯಾಯಾಂಗವು ಆಶಾದಾಯಕವಾಗಿರುತ್ತದೆ ಎಂಬ ಚಿತ್ರಣವನ್ನು ನೀಡುತ್ತಿವೆ ಎಂದು ಚಂದ್ರಚೂಡ್ ಅವರು ನುಡಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ