23/12/2024

Law Guide Kannada

Online Guide

ಇನ್ಮುಂದೆ 1/3 ರಷ್ಟು ಶಿಕ್ಷಾವಧಿ ಪೂರೈಸಿದ ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆ ಭಾಗ್ಯ

ಬೆಂಗಳೂರು: ಮೊದಲ ಬಾರಿಗೆ ಅಪರಾಧ ಎಸಗಿ, ವಿಚಾರಣೆ ಎದುರಿಸುತ್ತಿರುವ ಕೈದಿಗಳು ಆ ಅಪರಾಧದ ಗರಿಷ್ಠ ಶಿಕ್ಷಾವಧಿಯ ಮೂರನೇ ಒಂದರಷ್ಟು ಭಾಗವನ್ನು ಜೈಲಿನಲ್ಲಿ ಕಳೆದಿದ್ದರೆ ಅಂತಹ ಕೈದಿಗಳನ್ನು ಕಡ್ಡಾಯವಾಗಿ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ಮೂಲಕ ವಿಚಾರಣಾಧೀನ ಕೈದಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 479ನ್ನು ಪೂರ್ವಾನ್ವಯವಾಗಿ ಕಡ್ಡಾಯ ಜಾರಿಯಾಗುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹೊಸ ಕ್ರಿಮಿನಲ್ ಕಾಯ್ದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 479 ಪೂರ್ವಾನ್ವಯವಾಗಲಿದ್ದು, ಅಪರಾಧಗಳಿಗೆ ನಿಗದಿಪಡಿಸಿರುವ 1/3 ಶಿಕ್ಷೆ ಪೂರೈಸಿರುವ ಅರ್ಹ ವಿಚಾರಣಾಧಿನ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಗಲಿದೆ.

ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಇರಿಸಿರುವ ವಿಚಾರವಾಗಿ ಸುಪ್ರೀಂಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸುತ್ತಿದ್ದು, ಹಿಂದಿನ ವಿಚಾರಣೆ ವೇಳೆ ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಸಂದೀಪ್ ಮೆಹ್ರಾ ಅವರಿದ್ದ ಪೀಠ ಸೆಕ್ಷನ್ 479 ಪೂರ್ವಾನ್ವಯವಾಗಲಿದೆಯೇ ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಕೇಳಿತ್ತು. ಇದಕ್ಕೆ ಸ್ಪಷ್ಟನೆ ನೀಡಲು ಕೇಂದ್ರದ ಪರ ಹಾಜರಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಕಾಲಾವಕಾಶ ಕೋರಿದ್ದರು.

ಇದೀಗ ಈ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸ್ಪಷ್ಟನೆ ನೀಡಿದ್ದು, ಸೆಕ್ಷನ್ 479 ಪೂರ್ವಾನ್ವಯವಾಗಲಿದೆ ಎಂದು ತಿಳಿಸಿದೆ. ಅದರಂತೆ ಆರೋಪಿ ಮೊದಲ ಬಾರಿಗೆ ಅಪರಾಧ ಪ್ರಕರಣದಲ್ಲಿ ಸಿಲುಕಿದ್ದು, ಈ ಹಿಂದೆ ಯಾವುದೇ ಶಿಕ್ಷೆಗೆ ಗುರಿಯಾಗಿರದೇ ಇದ್ದಲ್ಲಿ, ಅಪರಾಧಕ್ಕೆ ನಿಗದಿಪಡಿಸಿರುವ ಶಿಕ್ಷೆ ಅವಧಿಯ ಮೂರನೇ ಒಂದರಷ್ಟು ಸಮಯ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ದೊಡ್ಡ ಸಂಖ್ಯೆಯ ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.

ಇನ್ನು ಕೇಂದ್ರದ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್ ದೇಶದ ಎಲ್ಲಾ ಜೈಲು ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಬಿಎನ್ಎಎನ್ಎಸ್ ನ ಸೆಕ್ಷನ್ 479 ನ ಈ ನಿಬಂಧನೆಯನ್ನು ಮೂರು ತಿಂಗಳೊಳಗೆ ತ್ವರಿತವಾಗಿ ಜಾರಿ ಮಾಡಬೇಕು. ಈ ಕುರಿತಂತೆ ಜೈಲು ಅಧೀಕ್ಷಕರು ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸೆಕ್ಷನ್ 479 ನಿಬಂದನೆ ಏನು..?
ಬಿಎನ್ಎನ್ಎಸ್ ನ ಸೆಕ್ಷನ್ 479 ನಿಯಮವು ಸಿಆರ್ಪಿಸಿಯ ಸೆಕ್ಷನ್ 436ಎಗೆ ಪರ್ಯಾಯವಾಗಿ ಜಾರಿಗೆ ಬಂದಿದೆ. ಸೆಕ್ಷನ್ 436ಎ ನಿಯಮದ ಪ್ರಕಾರ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದು ಆತನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಅಥವಾ ನ್ಯಾಯಾಲಯದ ವಿಚಾರಣೆ ತ್ವರಿತವಾಗಿ ಮುಗಿಯದಿದ್ದಾಗ, ಆರೋಪಿಯು ಆತನ ವಿರುದ್ಧದ ಆರೋಪಗಳಿಗೆ ನಿಗದಿಪಡಿಸಲಾಗಿರುವ ಶಿಕ್ಷೆಯ ಅರ್ಧದಷ್ಟು ಸಮಯ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರೆ ಆತನಿಗೆ ಜಾಮೀನು ನೀಡಬಹುದಾಗಿದೆ.

ಬಿಎನ್ಎನ್ಎಸ್ ಸೆಕ್ಷನ್ 479 ನಲ್ಲಿ ಈ ನಿಬಂಧನೆಯ ಜತೆಗೆ ಮತ್ತೊಂದು ನಿಬಂಧನೆಯನ್ನು ಜಾರಿ ಮಾಡಲಾಗಿದೆ. ಅದರ ಪ್ರಕಾರ ಮೊದಲ ಬಾರಿಗೆ ಅಪರಾಧ ಎಸಗಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಸಿಲುಕಿದ್ದರೆ ಮತ್ತು ಈ ಹಿಂದೆ ಶಿಕ್ಷೆಗೆ ಗುರಿಯಾಗಿರದೇ ಇದ್ದರೆ ಅಂತಹ ಆರೋಪಿಯು ಆತನ ವಿರುದ್ಧದ ಆಪಾದನೆಗೆ ನಿಗದಿಪಡಿಸಲಾದ ಶಿಕ್ಷೆ ಅವಧಿಯ ಮೂರನೇ ಒಂದರಷ್ಟು ಸಮಯ ಜೈಲಿನಲ್ಲಿ ಕಳೆದಿದ್ದರೆ ಆತನನ್ನು ಸೆಕ್ಷನ್ 479 ಅಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ.

ಈ ನಿಯಮ ಮರಣದಂಡನೆ, ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧಗಳ ಅಡಿ ನ್ಯಾಯಾಂಗ ಬಂಧನಕ್ಕೆ ಸಿಲುಕಿರುವವರಿಗೆ ಅನ್ವಯಿಸುವುದಿಲ್ಲ. ಸೆಕ್ಷನ್ 479 ಅಡಿ ಜಾಮೀನು ಸಿಗಲು ಪ್ರಾಸಿಕ್ಯೂಷನ್ ಸಮ್ಮತಿಯೂ ಅಗತ್ಯವಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.