ಜಾಮೀನಿಗೆ ವಿಪರೀತ ಷರತ್ತು: ಬಲಗೈನಲ್ಲಿ ಕೊಟ್ಟು ಎಡಗೈಯಿಂದ ಹಿಂಪಡೆಯುವುದಕ್ಕೆ ಸಮ- ಸುಪ್ರೀಂ ಕೋರ್ಟ್
ನವದೆಹಲಿ: ಆರೋಪಿಗಳು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಸಹ ಕೋರ್ಟ್ ವಿಧಿಸುವ ಕೆಲ ಷರತ್ತುಗಳನ್ನ ಪೂರೈಸಲಾಗುವುದಿಲ್ಲ. ಅಂತೆಯೇ ಇಲ್ಲೊಬ್ಬರು ’13 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಸಹ 11 ಪ್ರಕರಣಗಳಲ್ಲಿ ಶ್ಯೂರಿಟಿ ಒದಗಿಸಲು ಆಗದೆ ಅಸಹಾಯಕತೆ ವ್ಯಕ್ತಪಡಿಸಿದ್ದ ವಿಚಾರ ಗಮನಿಸಿದ ಸುಪ್ರೀಂಕೋರ್ಟ್, ಜಾಮೀನಿಗೆ ವಿಪರೀತವಾದ ಷರತ್ತು ವಿಧಿಸಬಾರದು ಎಂದು ತಮ್ಮ ಅಭಿಪ್ರಾಯ ತಿಳಿಸಿದೆ.
ವಂಚನೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ 13 ಪ್ರಕರಣಗಳು ದಾಖಲಾಗಿರುವ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ಜಾಮೀನು ಮಂಜೂರು ಮಾಡುವುದು ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿಪರೀತವಾದ ಷರತ್ತುಗಳನ್ನು ವಿಧಿಸುವುದು ಬಲಗೈಯಲ್ಲಿ ಕೊಟ್ಟು, ಎಡಗೈಯಿಂದ ಹಿಂಪಡೆಯುವುದಕ್ಕೆ ಸಮ. ಸಂವಿಧಾನದ 21ನೇ ವಿಧಿಯು ನೀಡಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹಾಗೂ ಸಂಬಂಧಪಟ್ಟ ವ್ಯಕ್ತಿಯ ಹಾಜರಿರುವಿಕೆಯನ್ನು ಖಾತರಿಪಡಿಸುವ ಜಾಮೀನು ಆದೇಶವು ಸೂಕ್ತವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರು ತಮಗೆ ಈ 13 ಪ್ರಕರಣಗಳಲ್ಲಿಯೂ ಜಾಮೀನು ಸಿಕ್ಕಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದ ಜಾಮೀನು ಷರತ್ತುಗಳನ್ನು ಪೂರೈಸಲಾಗಿದೆ. ಆದರೆ ಇನ್ನುಳಿದ 11 ಪ್ರಕರಣಗಳಿಗೆ ಪ್ರತ್ಯೇಕವಾದ ಶ್ಯೂರಿಟಿ ಒದಗಿಸುವುದಕ್ಕೆ ತಮ್ಮಿಂದ ಆಗುತ್ತಿಲ್ಲ ಎಂದು ಅರ್ಜಿದಾರ ಹೇಳಿದ್ದು ಈ ಹೇಳಿಕೆಯನ್ನ ದಾಖಲಿಸಿಕೊಂಡ ನ್ಯಾಯ ಪೀಠವು, ’13 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ, ಅರ್ಜಿದಾರರಿಗೆ ಶ್ಯೂರಿಟಿ ಒದಗಿಸಲು ಆಗುತ್ತಿಲ್ಲ. ಅತಿಯಾದ ಷರತ್ತುಗಳನ್ನು ವಿಧಿಸುವುದರಿಂದ ಜಾಮೀನು ನಿರಾಕರಿಸಿದಂತಾಗುತ್ತದೆ ಎಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ತತ್ವ. ಅತಿಯಾದ ಷರತ್ತುಗಳು ಯಾವುವು ಎಂಬುದು ಪ್ರತಿ ಪ್ರಕರಣವನ್ನು ಆಧರಿಸಿರುತ್ತದೆ’ ಎಂದು ಹೇಳಿದೆ.
ರಾಜಸ್ಥಾನದಲ್ಲಿ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದ ಜಾಮೀನು ಆದೇಶದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರನ್ನು ಶ್ಯೂರಿಟಿಯಾಗಿ ನೀಡುವಂತೆ ಸೂಚಿಸಲಾಗಿದೆ. ಆದರೆ ಆರೋಪಿಯು ಹರಿಯಾಣದವರು. ಸ್ಥಳೀಯ ವ್ಯಕ್ತಿಯನ್ನು ಶ್ಯೂರಿಟಿಯಾಗಿ ನೀಡುವುದು ಅವರಿಗೆ ಬಹಳ ಕಷ್ಟದ ಕೆಲಸ. ಹೀಗಾಗಿ ಜಾಮೀನಿಗೆ ವಿಪರೀತ ಷರತ್ತು ವಿಧಿಸುವುದು ಸಲ್ಲದು ಎಂದು ನ್ಯಾಯ ಪೀಠ ತಿಳಿಸಿದೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ