ಸೆಟಲ್ ಮೆಂಟ್ ಆಧಾರದ ಮೇಲೆ ಪೋಕ್ಸೋ ಕೇಸ್ ರದ್ದು: ಹೈಕೋರ್ಟ್ ಕ್ರಮ ಕಾನೂನು ಬದ್ದವಲ್ಲ – ಸುಪ್ರೀಂ ಕೋರ್ಟ್
ನವದೆಹಲಿ: ಆರೋಪಿ ಮತ್ತು ಸಂತ್ರಸ್ತರ ನಡುವೆ “ಸೆಟಲ್ಮೆಂಟ್’’ ಅಥವಾ ಅವರ ನಡುವೆ ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂಬ ಆಧಾರದ ಮೇಲೆ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ದಾಖಲಿಸಿದ ಪ್ರಕರಣಗಳನ್ನು ರದ್ದುಗೊಳಿಸಿರುವ ಕೊಲ್ಕತ್ತಾ ಹೈಕೋರ್ಟ್ ಕ್ರಮ ಕಾನೂನು ಬದ್ದವಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂಕೋರ್ಟ್, ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಖಾಯಂಗೊಳಿಸಿದೆ.
14 ವರ್ಷದ ಸಂತ್ರಸ್ತ ಬಾಲಕಿಯ ಮೇಲೆ 25 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ ಆರೋಪದಡಿ ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ ಶಿಕ್ಷೆಯನ್ನು ಕೊಲ್ಕತ್ತಾ ಹೈಕೋರ್ಟ್ ರದ್ದುಪಡಿಸಿತ್ತು.
ಈ ಕುರಿತು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ. ಅಲ್ಲದೆ ಆರೋಪಿ ಹಾಗೂ ಸಂತ್ರಸ್ತೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂಬ ಆಧಾರದ ಮೇಲೆ ಪೋಕ್ಸ್ ಪ್ರಕರಣವನ್ನು ರದ್ದುಪಡಿಸಲಾಗದು ಎಂದು ನ್ಯಾ.ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾ. ಉಜ್ವಲ್ ಭುಯಾನ್ ಅವರಿದ್ದ ಪೀಠ, ಸ್ಪಷ್ಟಪಡಿಸಿದೆ.
ಇದೇ ವೇಳೆ ಹದಿಹರೆಯದ ಯುವತಿಯರು ತಮ್ಮ ಲೈಂಗಿಕ ಆಸೆಗಳನ್ನು ಹತ್ತಿಕ್ಕಬೇಕು ಎಂಬ ಹೈಕೋರ್ಟ್ ಅಭಿಪ್ರಾಯವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಸಂತ್ರಸ್ತೆಯ ಜವಾಬ್ದಾರಿ ಸರ್ಕಾರಕ್ಕೆ ಸೇರಿದ್ದು, ಆಕೆಯು ತನ್ನ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲು ಸಹಾಯ ಮಾಡಲು ಕ್ಲಿನಿಕಲ್ ಸೈಕಾಲಜಿಸ್ಟ್ ಸೇರಿದಂತೆ ಮೂವರು ತಜ್ಞರ ಸಮಿತಿ ರಚಿಸಬೇಕು. ಸಂತ್ರಸ್ತೆ ಹಾಗೂ ಮಗುವಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡುವ ನೆರವನ್ನು ಈ ಸಮಿತಿಯು ಪರಿಶೀಲಿಸಬೇಕು. ಈ ಕುರಿತಂತೆ ಕೈಗೊಂಡ ಕ್ರಮಗಳ ವರದಿಯನ್ನು 2024ರ ಅಕ್ಟೋಬರ್ 18ರೊಳಗೆ ಸಲ್ಲಿಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಇದೇ ವೇಳೆ ನ್ಯಾಯಾಲಯಗಳು ಕಾನೂನು ರೀತಿಯಲ್ಲಿ ನ್ಯಾಯದಾನ ಮಾಡಬೇಕೇ ವಿನಃ ಕಾನೂನಿಗೆ ವಿರುದ್ಧವಾಗಿ ವರ್ತಿಸಬಾರದು. ಪ್ರಸ್ತುತ ಪ್ರಕರಣದಲ್ಲಿ ಆರೋಪಿ 25 ವರ್ಷದ ವ್ಯಕ್ತಿಯಾಗಿದ್ದರೆ ಸಂತ್ರಸ್ತೆ 14 ವರ್ಷದ ಬಾಲಕಿ. ಈ ವಿಚಾರವನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ. ಆರೋಪಿ ಮತ್ತು ಸಂತ್ರಸ್ತೆಗೆ ಮಗು ಜನಿಸಿದೆ ಮತ್ತು ಆಕೆಯು ಆತನೊಟ್ಟಿಗೆ ಇದ್ದಾಳೆ ಎಂಬ ಕಾರಣಕ್ಕೆ ಹೈಕೋರ್ಟ್ ಪ್ರಕರಣ ರದ್ದುಪಡಿಸಿರುವ ಕ್ರಮ ಕಾನೂನುಬದ್ಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ. 16 ವರ್ಷ ಮೇಲ್ಪಟ್ಟವರ ನಡುವಿನ ಶೋಷಣೆಯಲ್ಲದ ಮತ್ತು ಸಮ್ಮತಿಯ ಲೈಂಗಿಕತೆಯನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬುದು ಇತರೆ ವೇದಿಕೆಗಳಲ್ಲಿ ಚರ್ಚಿಸಬಹುದಾದ ವಿಚಾರ. ಈ ವಿಚಾರಗಳನ್ನು ಪರಾಮರ್ಶಿಸುವುದು ನ್ಯಾಯಾಲಯದ ಕೆಲಸವಲ್ಲ. ಕಾನೂನಿನಲ್ಲಿ ಹೇಳಿರುವುದನ್ನು ನ್ಯಾಯಾಲಯಗಳು ಜಾರಿಗೊಳಿಸಬೇಕು ಎಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪೋಕ್ಸೋ ಕಾಯ್ದೆಯನ್ನ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾಗಿ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಜಾರಿ ಮಾಡಲಾಗಿದ್ದು, 14 ವರ್ಷದ ಬಾಲಕಿಯ ಮೇಲೆ 25 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದಾಗ ಅದು ಶೋಷಣೆಯಲ್ಲದ ಲೈಂಗಿಕತೆ ಎಂದು ಹೇಗೆ ಪರಿಗಣಿಸಲು ಸಾಧ್ಯ 18ಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ಒಪ್ಪಿಗೆ ನೀಡಿದ್ದರೂ ಅದು ಪರಿಗಣನಾರ್ಹವಲ್ಲ ಎಂದು ಕಾನೂನು ಸ್ಪಷ್ಟಪಡಿಸಿದೆ. ಹಾಗಿದ್ದೂ, ಅಂತಹ ಕೃತ್ಯವನ್ನು ಶೋಷಣೆಯಲ್ಲದ ಪ್ರಣಯ ಸಂಬಂಧ ಎಂದು ಪರಿಗಣಿಸುವುದಾದರೂ ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿ ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಖಾಯಂಗೊಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ