ಪ್ರತಿಫಲಾಧಾರಿತ ಸ್ಥಿರಾಸ್ತಿ ಕ್ರಯಪತ್ರ ರದ್ದುಗೊಳಿಸಲು ಸಹಾಯಕ ಕಮಿಷನರ್ ಗೆ ಅಧಿಕಾರವಿಲ್ಲ – ದಂಡ ವಿಧಿಸಿ ಹೈಕೋರ್ಟ್ ತೀರ್ಪು
ಬೆಂಗಳೂರು,ಆಗಸ್ಟ್,19,2024 (www.justkannada.in): ಹಿರಿಯ ನಾಗರಿಕ ಕಾಯ್ದೆಯಡಿ ಪ್ರತಿಫಲಾಧಾರಿತ ಸ್ಥಿರಾಸ್ತಿ ಕ್ರಯಪತ್ರವನ್ನು ರದ್ದುಗೊಳಿಸಲು ಸಹಾಯಕ ಕಮಿಷನರ್ ಗೆ ಅಧಿಕಾರವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್, ಅಧಿಕಾರ ಮೀರಿ ಕ್ರಯಪತ್ರ ರದ್ದುಗೊಳಿಸಿದ ಸಹಾಯಕ ಆಯುಕ್ತರಿಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ಹೈಕೋರ್ಟ್ ನ್ಯಾ. ಸಚಿನ್ ಶಂಕರ್ ಮಗದೊಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಸೂಕ್ತ ಮೌಲ್ಯ ನೀಡಿ ಸ್ಥಿರಾಸ್ತಿಯನ್ನು ಖರೀದಿಸಿದ ವರ್ಗಾವಣೆ ಪ್ರಕ್ರಿಯೆಯನ್ನು ಹಿರಿಯ ನಾಗರಿಕ ಕಾಯ್ದೆಯಡಿ ರದ್ದುಗೊಳಿಸಲು ಸಹಾಯಕ ಕಮಿಷನರ್ಗೆ ಅಧಿಕಾರವಿಲ್ಲ ಎಂದು ತಿಳಿಸಿದೆ.
ಅಧಿಕಾರ ಮೀರಿ ಕ್ರಯಪತ್ರ ರದ್ದುಗೊಳಿಸಿದ ಸಹಾಯಕ ಆಯುಕ್ತರಿಗೆ 25 ಸಾವಿರ ರೂ. ದಂಡ ವಿಧಿಸಿದ ಕೋರ್ಟ್, ಆಸ್ತಿ ಖರೀದಿ ಪ್ರಕ್ರಿಯೆಯು ಮೌಲ್ಯಯುತ ಪ್ರತಿಫಲಕ್ಕೆ ನಡೆದಿದ್ದಾಗ, ಅಂತಹ ಕ್ರಯಪತ್ರವನ್ನು ಸಹಾಯಕ ಆಯುಕ್ತರು ಹಿರಿಯ ನಾಗರಿಕ ಕಾಯ್ದೆಯಡಿ ರದ್ದುಗೊಳಿಸಲು ಸಾಧ್ಯವಿಲ್ಲ. ಸದರಿ ಪ್ರಕರಣದಲ್ಲಿ ಸಹಾಯಕ ಆಯುಕ್ತರು ಕರ್ತವ್ಯ ಚ್ಯುತಿ ತೋರಿದ್ದು, ತಮ್ಮ ಆಡಳಿತಾತ್ಮಕ ಅಧಿಕಾರವನ್ನು ಬಳಸುವಲ್ಲಿ ನ್ಯಾಯೋಚಿತ ತೋರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಹಾಯಕ ಆಯುಕ್ತರ ನಡೆಯ ಬಗ್ಗೆ ನ್ಯಾಯಪೀಠ ಗಂಭೀರ ಆಕ್ಷೇಪಗಳನ್ನು ಮಾಡಿದೆ.
ಸದರಿ ಅರ್ಜಿಯನ್ನು ರದ್ದುಗೊಳಿಸಲು ಹೈಕೋರ್ಟ್ ನ್ಯಾಯಪೀಠ ಎರಡು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ. ಮೊದಲನೇಯದಾಗಿ, ಪಕ್ಷಕಾರರು ತಮ್ಮೊಳಗಿನ ವಿವಾದವನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿದ್ದಾರೆ, ಎರಡನೇಯದಾಗಿ, ಸಹಾಯಕ ಆಯುಕ್ತರು ತನ್ನ ಅಧಿಕಾರ ಮಿತಿಯನ್ನು ಮೀರಿ ಕರ್ತವ್ಯ ಚ್ಯುತಿ ತೋರಿ ಕ್ರಯಪತ್ರ ರದ್ದುಗೊಳಿಸಿರುವುದು ಸಮರ್ಥನೀಯವಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ