23/12/2024

Law Guide Kannada

Online Guide

ಮುಷ್ಕರದಲ್ಲಿ ಭಾಗಿ : ಸುಪ್ರೀಂ ಅಸಮಾಧಾನ : ವಕೀಲರ ಸಂಘದ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ

ಬೆಂಗಳೂರು: ವಕೀಲರು ಪ್ರತಿಭಟನೆ/ಮುಷ್ಕರಗಳಲ್ಲಿ ಭಾಗಿಯಾಗುವಂತಿಲ್ಲ ಎಂಬ ನಿಯಮದ ಹೊರತಾಗಿಯೂ ವಕೀಲರು ಮುಷ್ಕರಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ , ವಕೀಲರ ಸಂಘದ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ವಕೀಲರೊಬ್ಬರು ಮುಷ್ಕರದಲ್ಲಿ ಭಾಗಿಯಾಗಿದ್ದ ವೇಳೆ ಅವರು ಪ್ರತಿನಿಧಿಸಬೇಕಿದ್ದ ಕಕ್ಷೀದಾರರ ವಿರುದ್ಧ ನ್ಯಾಯಾಲಯ ಪ್ರತಿಕೂಲ ಆದೇಶ ಹೊರಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾ. ಎ.ಎಸ್ ಓಕ ಹಾಗೂ ನ್ಯಾ. ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ವಕೀಲರ ನಡೆಗೆ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಈ ಕುರಿತಂತೆ ವಿವರಣೆ ನೀಡುವಂತೆ ಸೂಚಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಬಾ‌ರ್ ಅಸೋಸಿಯೇಷನ್ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆ ಅಡಿ ನೋಟಿಸ್ ಜಾರಿ ಮಾಡಿದೆ.

ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಮುಷ್ಕರಗಳಲ್ಲಿ ಭಾಗಿಯಾಗಬಾರದೆಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಆದರೂ ವಕೀಲರು ಮುಷ್ಕರ ನಡೆಸುವುದು ಮತ್ತು ನ್ಯಾಯಾಲಯದ ಕೆಲಸದಿಂದ ದೂರವಿರುವುದು ಸರಿಯಲ್ಲ. ಇಂತಹ ಬೆಳವಣಿಗೆಗಳನ್ನು ನಿಲ್ಲಿಸಬೇಕು. ಅದಕ್ಕಾಗಿ ವಕೀಲರ ಸಂಘದ ಪದಾಧಿಕಾರಿಗಳಿಗೆ ಹಾಜರಾಗಲು ಸೂಚಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ. ಈ ವಿಚಾರವಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಂದಲೂ ಪ್ರತಿಕ್ರಿಯೆಯನ್ನು ಕೇಳಿರುವ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ಹೈಕೋರ್ಟ್‌ ವಕೀಲರ ಸಂಘ ಮುಷ್ಕರ ಕೈಗೊಂಡಿದ್ದರಿಂದ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರು ಗೈರು ಹಾಜರಾಗಿದ್ದರು. ಈ ವೇಳೆ ನ್ಯಾಯಾಲಯ ಕಕ್ಷೀದಾರರಿಗೆ ಪ್ರತಿಕೂಲವಾದ ಆದೇಶ ಹೊರಡಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.