ಹಣಕ್ಕಾಗಿ ಸಿಡಿಆರ್ ಪಡೆದು ಮಾರಾಟ ಆರೋಪ: ಸಿಐಡಿ ಹೆಡ್ ಕಾನ್ಸ್ ಟೇಬಲ್ ಸೇರಿ ಇಬ್ಬರು ಸಿಸಿಬಿ ಬಲೆಗೆ
ಬೆಂಗಳೂರು: ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳ ಹೆಸರಿನಲ್ಲಿ ಅಕ್ರಮವಾಗಿ ಸಾರ್ವಜನಿಕರಿಂದ ಮೊಬೈಲ್ ಸಿಡಿಆರ್ (ಕರೆ ವಿವರಗಳ ದಾಖಲೆ) ರಹಸ್ಯವಾಗಿ ಆಲಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಐಡಿ ಹೆಡ್ ಕಾನ್ಸ್ ಟೇಬಲ್ ಮುನಿರತ್ನ ಹಾಗೂ ಪ್ರಕರಣದ ಕಿಂಗ್ ಪಿನ್ ನಾಗೇಶ್ವರ ರೆಡ್ಡಿ ಬಂಧಿತ ಆರೋಪಿಗಳು . ಈ ಕುರಿತು ಮಾಹಿತಿ ನೀಡಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ. ಚಂದ್ರಗುಪ್ತ ಅವರು, ಅನಧಿಕೃತವಾಗಿ ಸಿಡಿಆರ್ (ಕರೆಗಳ ವಿವರ) ಪಡೆದು ಮಾರಾಟ ಮಾಡುತ್ತಿದ್ದ ಡಿಟೆಕ್ಟಿವ್ ಏಜೆನ್ಸಿಗಳ ಪ್ರಕರಣ ಸಂಬಂಧ ಸಿಐಡಿಯ ಟೆಕ್ನಿಕಲ್ ಸೇಲ್ ಹೆಡ್ ಕಾನ್ ಸ್ಟೆಬಲ್ ಮುನಿರತ್ನ ರನ್ನ ಬಂಧಿಸಲಾಗಿದೆ. ಈಗಾಗಲೆ ಕಿಂಗ್ಪಿನ್ ಆಂಧ್ರಪ್ರದೇಶ ನಾಗೇಶ್ವರ ರೆಡ್ಡಿ ಸೆರೆಸಿಕ್ಕಿದ್ದಾನೆ. ಆರೋಪಿಗಳ ಪಟ್ಟಿ 12ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಮೇ 22ರಲ್ಲಿ ಮಹಾನಗರಿ ಡಿಟೆಕ್ಟಿವ್, ಸೆಕ್ಯೂರಿಟಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಕಚೇರಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪದಡಿ ಗೋವಿಂದರಾಜನಗರ ಮತ್ತು ಬಸವೇಶ್ವರನಗರ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಅಪರಾಧ ಪ್ರಕರಣಗಳ ಸಿಡಿಆರ್ ಪಡೆಯಲು ಕಾನೂನು ಅನ್ವಯ ತನಿಖಾಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಈ ಸಿಡಿಆರ್ ಅನ್ನು ಪಡೆಯಲು ಕಮಿಷನರೇಟ್ ನಲ್ಲಿ ಡಿಸಿಪಿ ಮತ್ತು ಜಿಲ್ಲೆಗಳಲ್ಲಿ ಎಸ್ ಪಿಗಳ ಅನುಮತಿ ಪಡೆಯಬೇಕು. ಸಿಡಿಆರ್ ಪಡೆಯುವ ಮುನ್ನ ಅಪರಾಧ ಪ್ರಕರಣದ ಆರೋಪಿ ಪಾತ್ರದ ಕುರಿತು ಮಾಹಿತಿ ಸಂಗ್ರಹಿಸಬೇಕು. ಈ ಕಾನೂನು ಪ್ರಕ್ರಿಯೆ ಬಳಿಕ ಸಿಡಿಆರ್ ತನಿಖಾಧಿಕಾರಿಗೆ ಸಿಗುತ್ತದೆ
ಈ ಮಾರ್ಗವಾಗಿ ಸಿಡಿಆರ್ ಪಡೆಯಲು ಅಧಿಕಾರಿಗಳು ಸಿಐಡಿಗೆ ಪತ್ರ ಬರೆದಾಗ ಸಿಐಡಿ ಟೆಕ್ನಿಕಲ್ ಸೆಲ್ ನ ಹೆಡ್ ಕಾನ್ ಸ್ಟೇಬಲ್ ಮುನಿರತ್ನ ಹಿರಿಯ ಅಧಿಕಾರಿಗಳ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್ ಸೇರಿಸಿ ಸರ್ವಿಸ್ ಪ್ರೊವೈಡರ್ ಗಳಿಗೆ ಸಲ್ಲಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಕೈ ಸೇರಿದ ಮೇಲೆ ಅಧಿಕೃತ ಸಿಡಿಆರ್ ಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡಿ ಅನಧಿಕೃತ ಸಿಡಿಆರ್ ಗಳನ್ನು ನಾಗೇಶ್ವರ ರೆಡ್ಡಿಗೆ 15 ರಿಂದ 20 ಸಾವಿರ ರೂ.ಗೆ ಮಾರಾಟ ಮಾಡಿಕೊಳ್ಳುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಸಿಐಡಿ ಸಿಬ್ಬಂದಿಯಿಂದ ಪಡೆದ ಸಿಡಿಆರ್ ಅನ್ನು ನಾಗೇಶ್ವರ ರಾವ್, ಪ್ರಶಾಂತ್ ನಗರದ ಮಹಾನಗರಿ ಡಿಟಿಕ್ಟಿಮ್ ಆ್ಯಂಡ್ ಸೆಕ್ಯೂರಿಟಿ ಸರ್ವೀಸ್, ಗೋವಿಂದರಾಜನಗರದ 4ನೇ ಮುಖ್ಯರಸ್ತೆಯಲ್ಲಿ ರಾಜಧಾನಿ ಕಾರ್ಪೋರೇಷನ್ ಹೆಸರಿನ ಡಿಟೆಕ್ಟಿವ್ ಎಜೆನ್ಸಿ ಬಸವೇಶ್ವರನಗರದಲ್ಲಿ ಸ್ಟೇಕ್ ಡಿಟೆಕ್ಟಿನ್ಗೆ ಕೊಟ್ಟು ಹಣ ಮಾಡುತ್ತಿದ್ದ. ಈ ಡಿಟೆಕ್ಟಿವ್ ಏಜೆನ್ಸಿಗಳಿಗೆ ಬೇಕಾದ ಸಿಡಿಆರ್ ನಂಬರ್ಗಳನ್ನು ಸಂಗ್ರಹಿಸಿ ಮತ್ತೆ ಮುನಿರತ್ನ ಮೂಲಕ ಪಡೆಯುತ್ತಿದ್ದ. ಈ ದಂಧೆ ಹಲವು ದಿನಗಳಿಂದ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಡಿಆರ್ ಪಡೆಯುತ್ತಿದ್ದವರು ಹೆಚ್ಚಾಗಿ ಪತಿ-ಪತ್ನಿ ಮತ್ತು ಪ್ರೇಮಿಗಳು, ಸಂಬಂಧದಲ್ಲಿ ಅನುಮಾನ ಮೂಡಿ ತಮ್ಮ ಪ್ರೀತಿ ಪಾತ್ರರು ಯಾರ ಸಂಪರ್ಕದಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕರೆಗಳ ವಿವರವನ್ನು ಕೋರಿ ಡಿಟೆಕ್ಟಿವ್ ಏಜೆನ್ಸಿಗಳ ಮೊರೆ ಹೋಗುತ್ತಿದ್ದರು. ಅಷ್ಟೇ ಅಲ್ಲದೆ ಉದ್ಯಮಿ, ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಕೆಲ ಪೊಲೀಸ್ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯ ಕಾಲ್ ಡಿಟೈಲ್ ಪಡೆದಿದ್ದಾರೆ ಎನ್ನಲಾಗಿದೆ. ನಾಗೇಶ್ವರ ರೆಡ್ಡಿ ಮತ್ತು ಮುನಿರತ್ನ ಬಂಧಿಸಿರುವ ಸಿಸಿಬಿ ತನಿಖೆ ಮುಂದುವರಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ