SC, ST ದೌರ್ಜನ್ಯ ತಡೆ ಕಾಯ್ದೆ: ದೂರುದಾರರ ವಾದ ಆಲಿಸದೇ ಮಂಜೂರಾಗಿದ್ದ ಜಾಮೀನು ರದ್ದುಗೊಳಿಸಿದ ಹೈಕೋರ್ಟ್
ನವದೆಹಲಿ: SC, ST ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ದೂರುದಾರರ ವಾದ ಆಲಿಸದೇ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನನ್ನ ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ 1989ರಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತರು ದೂರುದಾರರ ವಾದ ಆಲಿಸದೆ ಜಾಮೀನು ನೀಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ನವೀನ್ ಚಾವ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ಆರೋಪಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಅತ್ಯಾಚಾರ, 354 ಬಿ (ಮಹಿಳೆಯನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿರುವುದು), 506 (ಅಪರಾಧಿಕ ಬೆದರಿಕೆ) ಹಾಗೂ ಎಸ್ಸಿ ಎಸ್ಟಿ ಕಾಯ್ದೆಯ ಸೆಕ್ಷನ್ 3(1)(ತಿ)(i) (ಸಮುದಾಯದ ಮಹಿಳೆಯನ್ನು ಲೈಂಗಿಕವಾಗಿ ಸ್ಪರ್ಷಿಸುವುದು), 3(2)(v) (ಸಮುದಾಯದ ವ್ಯಕ್ತಿಯನ್ನು ಅಗೌರವಿಸುವುದು) ಅಡಿಯಲ್ಲಿ ಕೇಸು ದಾಖಲಾಗಿತ್ತು. ಪ್ರಕರಣದಲ್ಲಿ ಸಂತ್ರಸ್ತರಿಗೆ ನೋಟಿಸ್ ಜಾರಿ ಮಾಡದೆ ವಿಚಾರಣಾ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು.
ವಿಚಾರಣಾ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ, ಸಂತ್ರಸ್ತೆ, ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ತನಗೆ ಯಾವುದೇ ಸೂಚನೆ ನೀಡದೆ ಜಾಮೀನು ನೀಡಿ ಆದೇಶಿಸಲಾಗಿದೆ ಎಂದು ಅವರು ತನ್ನ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಂತ್ರಸ್ತರಿಗೆ ನೋಟಿಸ್ ನೀಡದೆ ಇರುವುದನ್ನು ಮತ್ತು ಅವರ ವಾದ ಆಲಿಸದೆ ವಿಚಾರಣೆಗೆ ಅವಕಾಶವನ್ನು ನೀಡದೆ ಆರೋಪಿಗೆ ಜಾಮೀನು ನೀಡಿರುವುದನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಪೀಠ, ಸೆಷನ್ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಪಡಿಸಿದೆ. ಅಲ್ಲದೆ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಕಡತವನ್ನು ಹಿಂತಿರುಗಿಸಿರುವ ಹೈಕೋರ್ಟ್ ದೂರುದಾರ ಸಂತ್ರಸ್ತರಿಗೆ ವಿಚಾರಣೆಯ ಅವಕಾಶವನ್ನು ನೀಡಿದ ನಂತರವೇ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿದೆ.
ವಿಚಾರಣಾ ನ್ಯಾಯಾಲಯ ದೂರುದಾರರಿಗೆ ಮಾಹಿತಿ ನೀಡದೆ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಈ ಕಾರಣಕ್ಕಾಗಿ ಆರೋಪಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 15 ಎ(3) ಮತ್ತು (5)ರ ಪ್ರಕಾರ ಆರೋಪಿಗೆ ಜಾಮೀನು ನೀಡುವ ಮುನ್ನ ದೂರುದಾರರು ಸಂತ್ರಸ್ತರಿಗೆ ನೋಟಿಸ್ ಜಾರಿ ಮಾಡಬೇಕು ಮತ್ತು ಅವರ ವಾದವನ್ನು ಆಲಿಸಬೇಕು. ಆ ಬಳಿಕವೇ ಆದೇಶ ನೀಡಬೇಕು. ಒಂದು ವೇಳೆ, ಈ ನಿಯಮ ಉಲ್ಲಂಘಿಸಿ ಜಾಮೀನು ನೀಡಲಾಗಿದ್ದರೆ ಅದನ್ನು ರದ್ದು ಪಡಿಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ