23/12/2024

Law Guide Kannada

Online Guide

ಫ್ಲ್ಯಾಟ್ ಗಳ ಮಾರಾಟದ ನಂತರವೂ ಬಿಲ್ಡರ್ ಗಳಿಗಿದೆ ಜವಾಬ್ದಾರಿ: ರೇರಾದ ಮಹತ್ವದ ಆದೇಶವೀಗ ಎಚ್ಚರಿಕೆ ಗಂಟೆ

ಬೆಂಗಳೂರು: ಇನ್ಮುಂದೆ ಬಿಲ್ಡರ್ ಗಳು ತಮ್ಮ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿದ ನ೦ತರ ತಮಗೂ ಕಟ್ಟಡಕ್ಕೂ ಯಾವುದೇ ಸ೦ಬಂಧವಿಲವೆಂದು ನುಣುಚಿಕೊಳ್ಳುವ೦ತಿಲ್ಲ. ತಮ್ಮ ಫ್ಲ್ಯಾಟ್ ಗಳನ್ನ ಮಾಲೀಕರಿಗೆ ಹಸ್ತಾಂತರಿಸಿದ ನಂತರವೂ ಕಂಡುಬರುವ ಲೋಪದೋಷಗಳಿಗೆ ತಾವೇ ಹೊಣೆಗಾರರಾಗಿರುತ್ತಾರೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಹೀಗೊಂದು ಮಹತ್ವದ ಆದೇಶ ಬಿಲ್ಡರ್ಸ್ ಗಳ ಪಾಲಿಗೆ ಕಹಿ ಸುದ್ದಿಯಾಗಿದೆ.
ಹೌದು ಫ್ಲ್ಯಾಟ್ ಮಾರಾಟದ ನಂತರವೂ ಬಿಲ್ಡರ್ ಗಳು ಫ್ಲ್ಯಾಟ್ ಗಳ ಐದು ವರ್ಷದ ಜವಾಬ್ದಾರಿ ಹೊರಬೇಕು. ಐದು ವರ್ಷಗಳಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದರೂ ಬಿಲ್ಡರ್ ಗಳೇ ಅದನ್ನ ಸರಿಪಡಿಸಬೇಕು.

ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳಲ್ಲಿ ಮನೆ ಖರೀದಿಸಿ ಕಳಪೆ ಕಾಮಗಾರಿಯ ಸಮಸ್ಯೆ ಎದುರಿಸುವ ಸಂತ್ರಸ್ತರಿಗೆ ಇದು ಸಂತಸದ ಸುದ್ದಿಯಾಗಿದೆ. ಫ್ಲ್ಯಾಟ್ ಗಳನ್ನು ನಿರ್ಮಿಸಿದ ಇನ್ಮುಂದೆ ಬಿಲ್ಡರ್ ಗಳು ತಮ್ಮ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿದ ನ೦ತರ ತಮಗೂ ಕಟ್ಟಡಕ್ಕೂ ಯಾವುದೇ ಸ೦ಬಂಧವಿಲವೆಂದು ನುಣುಚಿಕೊಳ್ಳುವ೦ತಿಲ್ಲ. ಫ್ಲ್ಯಾಟ್ ಗಳನ್ನು ಖರೀದಿದಾರರಿಗೆ ಹಸ್ತಾಂತರಿಸಿದ ನಂತರ ಐದು ವರ್ಷದೊಳಗೆ ಕಟ್ಟಡದಲ್ಲಿ ಬಿರುಕು ಮೂಡುವುದು, ನೀರು ಸೋರುವುದು ಮತ್ತಿತರರ ಯಾವುದೇ ಲೋಪದೋಷ ಕ೦ಡುಬ೦ದರೂ ಅದಕ್ಕೆ ಬಿಲ್ಡರ್ಗಳೇ ಸ೦ಪೂರ್ಣ ಹೊಣೆಗಾರರಾಗಿರುತ್ತಾರೆ.

ಎಸ್ಎನ್ ಆರ್ ಸ್ಕ್ವೇರ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಫ್ಲ್ಯಾಟ್ ಮಾಲೀಕ ಪ೦ಕಜ್ ಸಿಂಗ್ ದಾಖಲಿಸಿದ್ದ ದೂರು ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯ ಜಿ.ಆರ್.ರೆಡ್ಡಿ ಅವರಿದ್ದ ಪೀಠ ಈ ಆದೇಶ ನೀಡಿದೆ.

ಕೆ-ರೇರಾ ನೀಡಿರುವ ಮಹತ್ವದ ಈ ತೀರ್ಪಿನ ಪ್ರಕಾರ, ಫ್ಲ್ಯಾಟ್ ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ನ೦ತರ ಮು೦ದಿನ ಐದು ವರ್ಷಗಳ ಕಾಲ ಕಟ್ಟಡದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಿಲ್ಡರ್ ಗಳೇ ಹೊಣೆಗಾರರಾಗಿದ್ದು, ಈ ಲೋಪವನ್ನು ಅವರೇ ಸ್ವಂತ ಖರ್ಚಿನಿ೦ದ ಸರಿಪಡಿಸಬೇಕಾಗುತ್ತದೆ.

ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ 2016ರ ಸೆಕ್ಷನ್ 31ರಡಿ ಸಲ್ಲಿಸಿದ್ದ ದೂರನ್ನು ಮಾನ್ಯ ಮಾಡಿರುವ ಪ್ರಾಧಿಕಾರ, ಪ್ರತಿವಾದಿ ಎಸ್ ಎನ್ ಆರ್ ಸ್ಕ್ವೇರ್ ಪ್ರೈ. ಲಿ.ಗೆ ಅರ್ಜಿದಾರರ ಫ್ಲ್ಯಾಟ್ನಲ್ಲಿ ನೀರು ಸೋರಿಕೆ ತಡೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ. ಒ೦ದು ವೇಳೆ ಪ್ರತಿವಾದಿ ಬಿಲ್ಡರ್ ಆದೇಶ ಪಾಲಿಸದಿದ್ದರೆ ಅರ್ಜಿದಾರರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎ೦ದೂ ಪ್ರಾಧಿಕಾರ ಹೇಳಿದೆ.

ಬಹುತೇಕ ಪ್ರಕರಣಗಳಲ್ಲಿ ಬೃಹತ್ ಅಪಾರ್ಟ್ ಮೆ೦ಟ್ ಗಳನ್ನು ಕಟ್ಟುವ ಬಿಲ್ಡರ್ ಗಳು ತಾವು ಕಟ್ಟಿದ ಫ್ಲ್ಯಾಟ್ ಗಳನ್ನು ಸೇಲ್ ಮಾಡಿದ ಬಳಿಕ ಆ ಬಿಲ್ಡಿಂಗ್ ನತ್ತ ಮುಖ ಮಾಡೋದಿಲ್ಲ. ಒಂದೆರಡು ವರ್ಷಗಳಲ್ಲಿ ಆ ಕಟ್ಟಡದಲ್ಲಿ ಬಿರುಕು ಅಥವಾ ಇನ್ನಿತರೆ ಲೋಪದೋಷಗಳು ಕ೦ಡುಬ೦ದರೆ, ಅದಕ್ಕೂ ತಮಗೂ ಸ೦ಬ೦ಧವೇ ಇಲ್ಲ ಎ೦ಬಂತೆ ಇದ್ದು ಬಿಡುತ್ತಾರೆ. ಒ೦ದಷ್ಟು ಖರೀದಿದಾರರು ತಾವು ಖರೀದಸಿದ ಫ್ಲ್ಯಾಟ್ ಕ್ರಯಪತ್ರ ಹಾಗೂ ಇತರ ಮಹತ್ವದ ದಾಖಲೆ ಪತ್ರಗಳು, ನಿಬಂಧನೆಗಳನ್ನು ಸರಿಯಾಗಿ ಓದದೇ ಸಹಿ ಮಾಡಿ ಮತ್ತೆ ಪೇಚಾಡುತ್ತಾರೆ, ಪರದಾಡುತ್ತಾರೆ. ಇಂತಹ ಬೇಜವಾಬ್ದಾರಿ ಬಿಲ್ಡರ್ ಗಳಿಗೆ ಈ ಆದೇಶ ಎಚ್ಚರಿಕೆ ಗಂಟೆಯಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.