23/12/2024

Law Guide Kannada

Online Guide

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ವ್ಯಕ್ತಿಯ ಬಹುಮುಖ್ಯ ಹಕ್ಕು- ಹೈಕೋರ್ಟ್ ಅಭಿಪ್ರಾಯ

ಬೆಂಗಳೂರು: ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬಹುಮುಖ್ಯವಾದ ಹಕ್ಕು. ಪ್ರತಿಭಟನೆ ಪ್ರಯೋಗ ಶಾಲೆಯಲ್ಲಿ ನಡೆಯುವುದಿಲ್ಲ. ಪ್ರತಿಭಟನೆಗಳ ವೇಳೆ ಸಾರ್ವಜನಿಕ ಅಸ್ತಿಗಳಿಗೆ ಸಣ್ವ ಪುಟ್ಟ ಹಾನಿ ಸಂಭವಿಸುವುದು ಸಹಜ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಎಸ್.ದೀಕ್ಷಿತ್ ಅವರು ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಡೀಸೆಲ್ ದರವನ್ನ ಹೆಚ್ಚಳ ಮಾಡಿತ್ತು. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ 2024ರ ಜೂನ್ 20ರಂದು ಬಿಜೆಪಿಯ ವಿರಾಜಪೇಟೆ ಮಂಡಲದ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಯಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತಡೆ ಉಂಟಾಗಿದೆ. ಪ್ರತಿಭಟನಕಾರರು ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ತಮ್ಮ ವಿರುದ್ದ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸಲು ಕೋರಿ ಬಿಜೆಪಿಯ ವಿರಾಜಪೇಟೆ ಮಂಡಲದ ಅಧ್ಯಕ್ಷ ಸುವಿನ್ ಗಣಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣಎಸ್.ದೀಕ್ಷಿತ್ ಅವರು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಅರುಣ್ ಶ್ಕಾಮ್, “ಅರ್ಜಿದಾರರು ಕಾನೂನು ಪರಿಪಾಲಿಸುವ ನಾಗರಿಕರಾಗಿದ್ದು, ಅನುಮತಿ ಪಡೆದೇ ಪ್ರತಿಭಟನೆ ನಡೆಸಿದ್ದಾರೆ. ಆದರೆ, ರಾಜಕೀಯ ಪ್ರೇರಿತವಾಗಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ದೂರು ದಾಖಲಿಸಲಾಗಿದೆ. ಹೀಗಾಗಿ ಪ್ರಕರಣವನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನು ಆಕ್ಷೇಪಿಸಿ ವಾದ ಮಂಡಿಸಿದ ರಾಜ್ಯ ಪ್ರಾಸಿಕ್ಕೂಟರ್-1 ಬಿ.ಎ.ಬೆಳ್ಕೆಯಪ್ಪ, “ಪ್ರತಿಭಟನೆಯನ್ನು ಶಾಂತಿಯಿಂದ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಪ್ರತಿಭಟನೆ ನಡೆಸುವ ನೆಪದಲ್ಲಿ ಸಾರ್ವಜನಿಕ ಅಸ್ತಿಗೆ ಹಾನಿ ಉಂಟು ಮಾಡಿದ್ದಾರೆ. ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲಿನ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾರೆ. ಇದರಿಂದ ಶ್ರೀಸಾಮಾನ್ಯರಿಗೆ ತೊಂದರೆಯಾಗಿದೆ. ಅದ್ದರಿಂದ, ಪ್ರಕರಣ ರದ್ದುಪಡಿಸಬಾರದು’ ಎಂದರು.

ಈ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತ್ರಿಭಟನೆ ಪ್ರಜಾಪ್ರಭುತದ ಬಹುಮುಖ್ಯವಾದ ಹಕ್ಕು. ಈ ಪ್ರಕರಣದಲ್ಲಿ ರಸ್ತೆಗೆ ಅಲ್ಪ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಪ್ರತಿಭಟನೆಯನ್ನೇ ಮಾಡಬಾರದೆ? ಹೀಗಾದರೆ ಹೇಗೆ? ಅರ್ಜಿದಾರರು ಪ್ರತಿಭಟನೆಗೆ ಪೂರ್ವಾನುಮತಿ ಕೇಳಿದ್ದಾರಲ್ಲವೇ’ ಎಂದು ಪ್ರಶ್ನಿಸಿತು.

“ಅರ್ಜಿದಾರರು ಸ್ಥಳೀಯ ಶಾಸಕರು, ಮುಖ್ಯಮಂತ್ರಿ ಪ್ರತಿಕೃತಿ ದಹನ ಮಾಡಿ ರಸ್ತೆಗೆ ಹಾನಿ ಉಂಟು ಮಾಡಿದ್ದಾರೆ. ₹1ನಷ್ಟು ಹಾನಿಯಾದರೂ ಅಷ್ಟೇ, ₹50 ಸಾವಿರದಷ್ಟು ಹಾನಿಯಾದರೂ ಅಷ್ಟೇ, ಅದು ಸಾರ್ವಜನಿಕ ಅಸ್ತಿ. ಹಾಗಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣೆಸಬೇಕು” ಎಂದು ಬೆಳ್ಳಿಯಪ್ಪ ಅವರು ಕೋರಿದರು.

ಇದನ್ನು ಒಪ್ಪದ ನ್ಯಾಯಪೀಠ, “ಮಹಜರು ವರದಿಯಲ್ಲಿ ಸಾರ್ವಜನಿಕ ಅಸ್ತಿಯ ಹಾನಿಯ ಕುರಿತಂತೆ ಉಲ್ಲೇಖವಿಲ್ಲ. ಈ ರೀತಿಯ ಸಣ್ಣ. ಪುಟ್ಟ ವಿಷಯಗಳಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಲಾಗುವುದಿಲ್ಲಎಂದು ಹೇಳಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಎಲ್ಲ ನ್ಯಾಯಿಕ ಪ್ರಕ್ರಿಯೆ ಹಾಗೂ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.