23/12/2024

Law Guide Kannada

Online Guide

The Uttar Pradesh court has awarded death sentence to five criminals who brutally killed a lawyer in the middle of the road due to a property dispute

ಮೀರತ್‌: ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲರೊಬ್ಬರನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ಭೀಕರವಾಗಿ ಹತ್ಯೆ ಮಾಡಿದ್ದ ಐವರು ಅಪರಾಧಿಗಳಿಗೆ ಉತ್ತರಪ್ರದೇಶದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಮರ್‌ ಜೀತ್‌ ಬಾತ್ರ, ಗುರ್ನೀತ್‌ ಸಿಂಗ್‌, ಭುಪೇಂದ್ರ ಬಾತ್ರ, ಗುರ್ಪ್ರತಾಪ್‌ ಸಿಂಗ ಹಾಗೂ ಈತನ ಸ್ನೇಹಿತ ಗುರ್ಮೀತ್‌ ಸಿಂಗ್‌ ಮರಣದಂಡನೆಗೆ ಗುರಿಯಾದ ಅಪರಾಧಿಗಳು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ 31 ವರ್ಷದ ವಕೀಲ ಕರಮ್‌ ವೀರ್‌ ಸಿಂಗ್‌ ಅವರನ್ನು 2015ರ ಡಿಸೆಂಬರ್‌ 26 ರಂದು ಐವರು ಅಪರಾಧಿಗಳು ಒಟ್ಟಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದರು.

ವಕೀಲ ಕರಮ್‌ ವೀರ್‌ ಸಿಂಗ್‌ ಕಚೇರಿ ಕೆಲಸ ಮುಗಿಸಿ ತಂದೆ ಸತ್ಯಪಾಲ್‌ ಛಬ್ರಾ ಅವರೊಂದಿಗೆ ಕಾರಿನಲ್ಲಿ ಮನೆಯ ಕಡೆಗೆ ಹೋಗುತಿದ್ದರು ಈ ವೇಳೆ ಆರೋಪಿಗಳು ಮಾರ್ಗಮಧ್ಯದಲ್ಲಿ ಅಡ್ಡಗಟ್ಟಿ, ಕರಮ್‌ ವೀರ್‌ ಸಿಂಗ್‌ ಅವರನ್ನು ಕಾರಿನಿಂದ ಹೊರಗೆಳೆದು ಚೂರಿಗಳಿಂದ ಎದೆಗೆ, ಹೊಟ್ಟೆಗೆ ಇರಿದು ಭೀಕರವಾಗಿ ಕೊಲೆ ಮಾಡಿದ್ದರು.

ಈ ಮಧ್ಯೆ ಮಗನನ್ನು ರಕ್ಷಿಸಲು ಹೋದ ತಂದೆ ಸತ್ಯಪಾಲ್‌ ಛಬ್ರಾ ಅವರ ಮೇಲೂ ಹಲ್ಲೆ ಮಾಡಿದ್ದರು, ತಂದೆ ಸತ್ಯಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಹತ್ಯೆಗೀಡಾದ ವಕೀಲ ಕರಮ್‌ ವೀರ್‌ ಸಿಂಗ್‌ ಎರಡು ಬಾರಿ ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ವಕೀಲಿಕೆಯನ್ನೇ ಮುಂದುವರೆಸುತ್ತಿದ್ದರು. ತಂದೆ ಸತ್ಯಪಾಲ್‌ ಪತ್ರಕರ್ತರಾಗಿದ್ದರು. ಹತ್ಯೆ ವೇಳೆ ವಕೀಲಕರಮ್‌ ವೀರ್‌ ಸಿಂಗ್‌ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಪತಿಯ ಮರಣದ ಬಳಿಕ ಮಗುವಿಗೆ ಜನ್ಮ ನೀಡಿದ್ದರು.

ಈ ವಿಚಾರವನ್ನು ಕೂಡ ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಾಧೀಶ ಮಹೇಶ್‌ ಕುಮಾರ್‌ ಅವರು, ಹಸುಗೂಸಿಗೆ ತಂದೆಯ ಮುಖವನ್ನೇ ಕಾಣದಂತೆ ಮಾಡಿದ ಆರೋಪಿಗಳ ಕೃತ್ಯ ಅತ್ಯಂತ ಹೀನವಾದದ್ದು ಎಂದು ಕಿಡಿಕಾರಿದರು. ಅಲ್ಲದೇ ಮೃತಪಟ್ಟ ವಕೀಲನ ಹೃದಯಕ್ಕೆ ಹತ್ತು ಬಾರಿ ಚೂರಿಯಿಂದ ಇರಿದಿರುವುದು ವೈದ್ಯಕೀಯ ದಾಖಲೆಗಳಲ್ಲಿ ಕಾಣಬಂದಿದೆ. ಆರೋಪಿಗಳ ಕೃತ್ಯ ಭೀಕರವಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ
ಉಲ್ಲೇಖಿಸಿದ್ದಾರೆ.

ವಕೀಲನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹರಾನಪುರ ಪೊಲೀಸರು ಆರೋಪಿತರ ವಿರುದ್ಧ
ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 307, 147,148, 149, 341 ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿ, ಆರೋಪಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ ಪರ ಸರ್ಕಾರಿ ಅಭಿಯೋಜಕ ಬಿಕ್ರಂ ಸಿಂಗ್‌ ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.